ಕೊಲ್ಕತ್ತಾ: ಲೋಕಸಭೆಯ ಮಾಜಿ ಸ್ಪೀಕರ್ ಹಾಗೂ ಹಿರಿಯ ಕಮ್ಯೂನಿಸ್ಟ್ ಮುಖಂಡ ಸೋಮನಾಥ ಚಟರ್ಜಿ ಅವರು ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 89 ವರ್ಷಗಳ ಸೋಮನಾಥ್ ಚಟರ್ಜಿ ಅವರನ್ನು ನಿನ್ನೆ ಕೋಲ್ಕತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅಲ್ಲದೆ ಕೃತಕ ಉಸಿರಾಟದ ವ್ಯವಸ್ಥೆಯನ್ನೂ ಅಳವಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ವಿಧಿವಶರಾಗಿದ್ದಾರೆ.
ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಚಟರ್ಜಿ ಅವರು ಬಳಲುತ್ತಿದ್ದು, ಇದಲ್ಲದೆ ಕಿಡ್ನಿ ಸೋಂಕಿನಿಂದಾಗಿಯೂ ಚಟರ್ಜಿ ಬಳಲುತ್ತಿದ್ದರು.
ಹತ್ತು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಸೋಮನಾಥ ಚಟರ್ಜಿ 13ನೇ ಲೋಕಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. ಕಳೆದ ಜುಲೈನಲ್ಲಿ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚೇತರಿಸಿಕೊಂಡಿದ್ದರು. ಆದರೆ, ಒಂದೇ ತಿಂಗಳ ಅಂತರದಲ್ಲಿ ಮತ್ತೆ ಅನಾರೋಗ್ಯಕ್ಕೀಡಾಗಿದ್ದಾರು. ಎಡರಂಗದ ಅಗ್ರಮಾನ್ಯ ನಾಯಕರೆನಿಸಿಕೊಂಡಿದ್ದ ಸೋಮನಾಥ ಚಟರ್ಜಿ ಅವರನ್ನು 2008ರಲ್ಲಿ ಸಿಪಿಎಂನಿಂದ ಉಚ್ಚಾಟಿಸಲಾಗಿತ್ತು.