ನವದೆಹಲಿ: ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಚಾರ್ಜ್ ಶೀಟ್ ವಿವರ ಮಾಧ್ಯಮಕ್ಕೆ ಸೋರಿಯಾಗದಂತೆ ತಡೆಯಬೇಕು ಎಂದು ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರು ಬುಧವಾರ ಕೋರ್ಟ್ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ಹೆಚ್ಚುವರಿ ಮುಖ್ಯ ಮೆಟ್ರೋಪೊಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಅವರು, ಈ ಸಂಬಂಧ ದೆಹಲಿ ಪೊಲೀಸರಿಗೆ ನೋಟಿಸ್ ನೀಡಿದ್ದು, ಆಗಸ್ಟ್ 25ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದ್ದಾರೆ.
ದೆಹಲಿ ಸಿಎಂ, ಡಿಸಿಎಂ ಪರವಾಗಿ ವಕೀಲ ಮೊಹ್ದ್ ಇರ್ಶಾದ್ ಅವರು ಇಂದು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ತನಿಖಾಧಿಕಾರಿಗಳು ಚಾರ್ಜ್ ಶೀಟ್ ನ ಕೆಲವು ಮಾನಹಾನಿಕರವಾದ ಅಂಶಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನಿನ್ನೆಯಷ್ಟೇ ದೆಹಲಿ ಸಿಎಂ, ಡಿಸಿಎಂ ಹಾಗೂ 11 ಆಪ್ ಶಾಸಕರ ವಿರುದ್ಧ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು.