ಮಾಜಿ ಪ್ರಧಾನಂತ್ರಿ ಅಟಲ್ ಬಿಹಾರಿ ವಾಜಪೇಯಿ
ನವದೆಹಲಿ: ಮಾಜಿ ಪ್ರಧಾನಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅಜಾತ ಶತ್ರುವಿನ ಆರೋಗ್ಯಕ್ಕಾಗಿ ಇಡೀ ದೇಶವೇ ಪ್ರಾರ್ಥನೆ ಸಲ್ಲಿಸುತ್ತಿದೆ.
ವಾಜಪೇಯಿಯವರ ಆರೋಗ್ಯ ಸ್ಥಿತಿ ಕುರಿತಂತೆ ಈಗಾಗಲೇ ಹಲವರಲ್ಲಿ ಆತಂಕ ಮನೆ ಮಾಡಿದ್ದು, ಈಗಾಗಿ ಬಿಜೆಪಿ ಅಗ್ರ ನಾಯಕರು ದೆಹಲಿಯ ಏಮ್ಸ್ ಆಸ್ಪತ್ರೆಗೆ ಭೇಟಿ ಮೇರು ನಾಯಕನ ಯೋಗಕ್ಷೇಮ ವಿಚಾರಿಸುತ್ತಿದ್ದಾರೆಂದು ತಿಳಿದುಬಂದಿದೆ.
ಈಗಾಗಲೇ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಸಚಿವರಾದ ಪಿಯೂಷ್ ಗೋಯಲ್, ಸ್ಮೃತಿ ಇರಾನಿ, ಮೀನಾಕ್ಷಿ ಲೇಖಿ ಸೇರಿದಂತೆ ಹಲವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಾಜಪೇಯಿಯವರ ಆರೋಗ್ಯ ಶೀಘ್ರಗತಿಯಲ್ಲಿ ಸುಧಾರಿಸಲೆಂದು ಹಲವರು ಹ್ಯಾಷ್'ಟ್ಯಾಗ್ ಗಳೊಂದಿಗೆ ಪ್ರಾರ್ಥಿಸುತ್ತಿದ್ದಾರೆ. ರಾಜಕೀಯ ಮುಖಂಡರಾದ ಶಶಿ ತರೂರ್, ಒಮರ್ ಅಬ್ದುಲ್ಲಾ, ವಿಜಯ್ ಗೋಯಲ್ ಸೇರಿದಂದೆ ಹಲವು ನಾಯಕರು ಟ್ವಿಟರ್ ಮೂಲಕ ವಾಜಪೇಯಿಯವರು ಗುಣಮುಖರಾಗಲೆಂದು ಆಶಿಸುತ್ತಿದ್ದಾರೆ.
ಈ ನಡುವೆ ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿದ್ದು, ಈಗಾಗಲೇ ಏಮ್ಸ್ ಆಸ್ಪತ್ರೆಯ ಹೊರರೋಗಿಗಳ ಭೇಟಿಯನ್ನು ಸಂಪೂರ್ಣ ಬಂದ್ ಮಾಡಿಸಲಾಗಿದೆ. ಆಸ್ಪತ್ರೆಯ ಹೊರ ಹಾಗೂ ಒಳಾಂಗಣದಲ್ಲಿ, ವಾಜಪೇಯಿಯವರ ನಿವಾಸದಲ್ಲಿಯೂ ಕೂಡ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ. ಇನ್ನು ಸಾರ್ವಜನಿಕರೂ ಕೂಡ ಏಮ್ಸ್ ರಸ್ತೆಯತ್ತ ಬಾರದಂತೆ ಪೊಲೀಸರು ಸೂಚನೆಗಳನ್ನು ನೀಡುತ್ತಿದ್ದು, ಆಸ್ಪತ್ರೆಯ ಆವರಣದಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ.