ವಾಜಪೇಯಿ ಸ್ಥಿತಿ ಗಂಭೀರ: 2ನೇ ಬಾರಿ ಏಮ್ಸ್'ಗೆ ಭೇಟಿ ನೀಡಿದ ಪ್ರಧಾನಿ ಮೋದಿ
ನವದೆಹಲಿ: ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಈ ಹಿನ್ನಲೆಯಲ್ಲಿ ರಾಜಧಾನಿ ದೆಹಲಿಯ ಏಮ್ಸ್ ಆಸ್ಪತ್ರೆಗೆ 2ನೇ ಬಾರಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭೇಟಿ ನೀಡಿದ್ದಾರೆಂದು ಗುರುವಾರ ತಿಳಿದುಬಂದಿದೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ವಾಜಪೇಯಿಯವರಿಗೆ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ ಎಂದು ವರದಿಗಳು ತಿಳಿಸಿವೆ.
ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮತ್ತೆ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದು, ಮೋದಿಯವರೊಂದಿಗೆ ಬಿಜೆಪಿ ರಾಷ್ಟ್ಯಾಧ್ಯಕ್ಷ ಅಮಿತ್ ಶಾ ಅವರು ಸಾಥ್ ನೀಡಿದ್ದಾರೆ.
ಈಗಾಗಲೇ ಆಸ್ಪತ್ರೆಯಲ್ಲಿಯೇ ಅಮಿತ್ ಶಾ ಅವರು ಬೀಡು ಬಿಟ್ಟಿದ್ದು, ಆಸ್ಪತ್ರೆಗೆ ಭೇಟಿ ನೀಡಿದ ಮೋದಿಯವರಿಗೆ ಅಮಿತ್ ಶಾ ಅವರು ವಾಜಪೇಯಿಯವರ ಆರೋಗ್ಯ ಸ್ಥಿತಿ ಕುರಿತಂತೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಪ್ರಧಾನಿ ಮೋದಿಯವರು 30 ನಿಮಿಷಗಳ ಕಾಲ ಕಳೆದಿದ್ದಾರೆಂದು ತಿಳಿದುಬಂದಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವಲ್ಲೇ ವಾಜಪೇಯಿಯವರ ನಿವಾಸದತ್ತ ಬಿಜೆಪಿ ಸಚಿವರು ಹಾಗೂ ಇನ್ನಿತರೆ ನಾಯಕರು ಭೇಟಿ ನೀಡುತ್ತಿದ್ದು, ಏಮ್ಸ್ ಆಸ್ಪತ್ರೆಯ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ವಾಜಪೇಯಿಯವರ ಸ್ಥಿತಿ ಕುರಿತಂತೆ ಮಾಧ್ಯಮಗಳಿಗೆ ಯಾವುದೇ ರೀತಿಯ ಹೇಳಿಕೆಗಳನ್ನು ನೀಡದಂತೆ ಹಿರಿಯ ನಾಯಕರು ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ. ವಾಜಪೇಯಿಯವರ ಆರೋಗ್ಯ ಸ್ಥಿತಿ ಕುರಿತು ಏಮ್ಸ್ ಆಸ್ಪತ್ರೆ ಇಂದು ಸಂಜೆ ಮತ್ತೊಂದು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಿದೆ ಎಂದು ವರದಿಗಳು ತಿಳಿಸಿವೆ.
ವಾಜಪೇಯಿಯವರ ಆರೋಗ್ಯ ಸ್ಥಿತಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ರಾಜನಾಥ ಸಿಂಗ್ ಅವರು, ವಾಜಪೇಯಿಯವರ ಸ್ಥಿತಿ ಈಗಲೂ ಗಂಭೀರವಾಗಿದೆ ಎಂದು ಹೇಳಿದ್ದಾರೆ.