ನವದೆಹಲಿ: ಅಟಲ್ ಬಿಹಾರಿ ವಾಜಪೇಯಿ ಬಗ್ಗೆ ಪಂಡಿತ್ ಜವಹರ್ ಲಾಲ್ ನೆಹರೂ ಅವರ ಆಗಲೇ ಭವಿಷ್ಯವಾಣಿಯೊಂದನ್ನು ನುಡಿದಿದ್ದರು. ಅಚ್ಚರಿ ಎಂದರೆ ಅದು ನಿಜ ಕೂಡ ಆಗಿತ್ತು.
ಹೌದು.. 1957ರಲ್ಲಿ ಅಟಲ್ ಬಿಹಾರಿ ವಾಡಜಪೇಯಿ ಅವರು ಬಲರಾಮ್ ಪುರ ಕ್ಷೇತ್ರದ ಸಂಸದರಾಗಿ ಸಂಸತ್ ಗೆ ಕಾಲಿಟ್ಟಿದ್ದರು. ಅಂದು ಸಂಸತ್ ನಲ್ಲಿ ವಾಜಪೇಯಿ ಮಾಡಿದ್ದ ಭಾಷಣವನ್ನು ಕೇಳಿದ್ದ ಅಂದಿನ ಪ್ರಧಾನಿ ಜವಹರ್ ಲಾಲ್ ನೆಹರೂ ಅವರು ಸ್ಪೂರ್ತಿಗೊಂಡಿದ್ದರು. ವಿದೇಶಾಂಗ ನೀತಿಗಳ ಬಗ್ಗೆ ವಾಜಪೇಯಿ ಅವರಿಗಿದ್ದ ಮಾಹಿತಿ, ಜ್ಞಾನ ಮತ್ತು ವಾಕ್ಚುತರ್ಯವನ್ನು ನೆಹರೂ ಅವರು ಗಮನಿಸಿದ್ದರು.
ಅಂದಿನ ದಿನಗಳಲ್ಲಿ ವಾಜಪೇಯಿ ಪರಿಚಯ ಸದನಕ್ಕೆ ಅಷ್ಟಾಗಿ ಇರಲಿಲ್ಲ. ಸದನದಲ್ಲಿ ವಾಜಪೇಯಿ ಅವರು ಹಿಂದಿನ ಆಸನಗಳಲ್ಲಿ ಕುಳಿತುಕೊಳ್ಳುತ್ತಿದ್ದರು. ಆದರೆ ವಾಜಪೇಯಿ ಅವರ ವಾಕ್ಚಾತುರ್ಯಕ್ಕೆ ಮಾರುಹೋಗಿದ್ದ ನೆಹರೂ ಅವರು ಸದನಗದಲ್ಲಿ ವಾಜಪೇಯಿ ಭಾಷಣಕ್ಕೆ ಹೆಚ್ಚು ಗಮನ ನೀಡುತ್ತಿದ್ದರು. ವಾಜಪೇಯಿ ಅವರ ಭಾಷಣದಿಂದ ನೆಹರೂ ಅವರು ಎಷ್ಟರ ಮಟ್ಟಿಗೆ ಪ್ರಭಾವಿತರಾಗಿದ್ದರು ಎಂದರೆ ನೆಹರೂ ಅವರು ತಮ್ಮ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ ವಾಜಪೇಯಿ ಅವರನ್ನು ಉದ್ದೇಶಿಸಿ ಈ ಯುವ ಭವಿಷ್ಯದಲ್ಲಿ ಭಾರತದ ಪ್ರಬಲ ಪ್ರಧಾನಿಯಾಗುತ್ತಾನೆ ಎಂದು ಹೇಳಿದ್ದರಂತೆ.
ಈ ಬಗ್ಗೆ ಖ್ಯಾತ ಲೇಖಕ ಕಿಂಗ್ ಶುಕ್ ನಾಗ್ ಅವರು ತಮ್ಮ ಒಂದು ಪುಸ್ತಕದಲ್ಲಿ ಉಲ್ಲೇಖಿಸಿದ್ದು, ತಮ್ಮ 'ಅಟಲ್ ಬಿಹಾರಿ ವಾಜಪೇಯಿ: ಎ ಮ್ಯಾನ್ ಫಾರ್ ಆಲ್ ಸೀಸನ್' ಎಂಬ ಪುಸ್ತಕದಲ್ಲಿ ಈ ಬಗ್ಗೆ ಬರೆದಿದ್ದಾರೆ. ಒಮ್ಮೆ ಬ್ರಿಟೀಷ್ ಪ್ರಧಾನಿ ಭಾರತಕ್ಕೆ ಭೇಟಿ ನೀಡಿದ್ದಾಗ ಅವರನ್ನು ಸ್ವಾಗತಿಸಿದ್ದ ನೆಹರೂ ಅವರು, ಬಳಿಕ ಕಾರ್ಯಕ್ರಮವೊಂದರಲ್ಲಿ ಬ್ರಿಟೀಷ್ ಪ್ರಧಾನಿಗೆ ವಾಜಪೇಯಿ ಅವರನ್ನು ಪರಿಚಯ ಮಾಡಿಕೊಟ್ಟಿದ್ದರಂತೆ. ಅಂದು ವಾಜಪೇಯಿ ಅವರನ್ನು ತೋರಿಸುತ್ತಾ ಇವರನ್ನು ನೋಡಿ ಇವರು ವಿಪಕ್ಷದ ಯುವ ನಾಯಕ. ಭವಿಷ್ಯದ ಭಾವಿ ಪ್ರಧಾನ ಮಂತ್ರಿ ಎಂದು ಸಂಬೋಧಿಸಿದ್ದರು ಎಂದು ಕಿಂಗ್ ಶುಕ್ ನಾಗ್ ಬರೆದಿದ್ದರು.
ಅಂತೆಯೇ ವಾಜಪೇಯಿ ಅವರೂ ಕೂಡ ನೆಹರೂ ಅವರನ್ನು ಎಷ್ಟರಮಟ್ಟಿಗೆ ಗೌರವಿಸುತ್ತಿದ್ದರು ಎಂಬುದಕ್ಕೆ ಕಿಂಗ್ ಶುಕ್ ನಾಗ್ ಒಂದು ಉದಾಹರಣೆ ನೀಡಿದ್ದು, 1977ರಲ್ಲಿ ವಾಜಪೇಯಿ ಅವರು ವಿದೇಶಾಂಗ ಸಚಿವರಾಗಿದ್ದಾಗ ಕಚೇರಿಗೆ ಆಗಮಿಸುತ್ತಿದ್ದಾಗ ಕಚೇರಿಯ ಗೋಡೆಯಲ್ಲಿದ್ದ ನೆಹರೂ ಅವರ ಭಾವಚಿತ್ರ ನಾಪತ್ತೆಯಾಗಿತ್ತು. ಕೂಡಲೇ ತಮ್ಮ ಕಾರ್ಯದರ್ಶಿಯನ್ನು ಕರೆದಿದ್ದ ವಾಜಪೇಯಿ ಅವರು ನೆಹರೂ ಭಾವಚಿತ್ರದ ಬಗ್ಗೆ ವಿಚಾರಿಸಿದ್ದರು. ಅಲ್ಲದೆ ಕೇವಲ ಅರ್ಧಗಂಟೆಯಲ್ಲೇ ಮತ್ತೆ ಅದೇ ಜಾಗಕ್ಕೇ ನೆಹರೂ ಅವರ ಭಾವಚಿತ್ರ ವಾಪಸ್ ಬರುವಂತೆ ಮಾಡಿದ್ದರು ಎಂದು ಕಿಂಗ್ ಶುಕ್ ನಾಗ್ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos