ದೇಶ

'ಸ್ಮೃತಿ ಸ್ಥಳ'ದತ್ತ ವಾಜಪೇಯಿ ಪಾರ್ಥೀವ ಶರೀರ; ಮೆರವಣಿಗೆ ಜೊತೆ ನಡೆದು ಸಾಗಿದ ಪ್ರಧಾನಿ ಮೋದಿ

Nagaraja AB

ನವ ದೆಹಲಿ:ರಾಜ್ ಘಾಟ್ ಬಳಿ ಇರುವ ರಾಷ್ಟ್ರೀಯ ಸ್ಮೃತಿ ಸ್ಥಳದತ್ತ ಹೊರಟ ಮಾಜಿ ಪ್ರಧಾನಿ ವಾಜಪೇಯಿ ಅವರ ಪಾರ್ಥಿವ ಶರೀರ ಮೆರವಣಿಗೆ ವಾಹನದ ಜೊತೆಗೆ ಪ್ರಧಾನಿ ನರೇಂದ್ರಮೋದಿ   ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಡೆದು ಸಾಗಿದರು.

ಬಿಜೆಪಿ ಕೇಂದ್ರ ಕಚೇರಿಯಿಂದ ಹೊರಟ ಪಾರ್ಥಿವ ಶರೀರದ  ಅಂತಿಮ ಯಾತ್ರೆಯಲ್ಲಿ  ಲಕ್ಷಾಂತರ ಜನರ ಮಧ್ಯೆಯೂ ಪ್ರಧಾನಿ ನರೇಂದ್ರಮೋದಿ  ತನ್ನ ನೆಚ್ಚಿನ ಗುರುವಿನ ಅಂತಿಮ ಯಾತ್ರೆಯಲ್ಲಿ ನಡೆದು ಸಾಗುವ ಮೂಲಕ  ಗುರು- ಶಿಷ್ಯರ ನಡುವಿನ ಸಂಬಂಧವನ್ನು ಜಗತ್ತಿಗೆ ಸಾರಿ ಹೇಳಿದರು.
ವಾಜಪೇಯಿ ಪಾರ್ಥಿವ ಶರೀರದ ವಾಹನದ ಹಿಂದೆ ಪ್ರಧಾನಿ ನರೇಂದ್ರಮೋದಿ ಅವರ ಜೊತೆಗೆ
ಸಂಪುಟ ಸಚಿವರು, ಬಿಜೆಪಿ ಪಕ್ಷದ ಹಿರಿಯ ನಾಯಕರು, ವಾಜಪೇಯಿ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ನಡೆದು ಸಾಗಿದರು.
ಜವಾಹರಲಾಲ್ ನೆಹರೂ ಅವರ ಸಮಾಧಿ  ಶಾಂತಿವನ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಸಮಾಧಿ ವಿಜಯ್ ಘಾಟ್  ಬಳಿ ಇರುವ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಸಂಜೆ 4 ಗಂಟೆಗೆ ಅಂತ್ಯಸಂಸ್ಕಾರ ನಡೆಯಲಿದೆ. 2012ರಲ್ಲಿ ನಿಧನರಾಗಿದ್ದ ಮಾಜಿ ಪ್ರಧಾನಿ ಐಕೆ ಗುಜ್ರಾಲ್ ಅವರ ಅಂತ್ಯಸಂಸ್ಕಾರವನ್ನು ರಾಷ್ಟ್ರೀಯ ಸ್ಮೃತಿ ಸ್ಥಳದ ಬಳಿಯೇ  ನಡೆಸಲಾಗಿತ್ತು.
SCROLL FOR NEXT