ಔರಂಗಾಬಾದ್ ಕಾರ್ಪೋರೇಷನ್ ನಲ್ಲಿ ಹೈಡ್ರಾಮಾ
ಔರಂಗಾಬಾದ್: ಇತ್ತೀಚೆಗಷ್ಟೇ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ವಿರೋಧಿಸಿದ ಎಂಐಎಂ ಕಾರ್ಪೋರೇಟರ್ ಗೆ ಸಭೆಯಲ್ಲೇ ಬಿಜೆಪಿ ನಾಯಕರು ಧರ್ಮದೇಟು ನೀಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ವಾಜಪೇಯಿ ಅವರಿಗೆ ಸಂತಾಪ ಸೂಚಿಸುವ ವಿಚಾರವಾಗಿ ಮಹಾರಾಷ್ಟ್ರದ ಔರಂಗಬಾದ್ ಮಹಾನಗರ ಪಾಲಿಕೆಯಲ್ಲಿ ದೊಡ್ಡ ಜಟಾಪಟಿಯೇ ನಡೆದಿದ್ದು, ಸಭೆಯಲ್ಲೇ ಎಂಐಎಂ ಕಾರ್ಪೋರೇಟರ್ ಗೆ ಬಿಜೆಪಿ ನಾಯಕರು ಥಳಿಸಿರುವ ಘಟನೆ ವರದಿಯಾಗಿದೆ. ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದ ಹಿನ್ನೆಲೆಯಲ್ಲಿ ಶುಕ್ರವಾರ ಔರಂಗಬಾದ್ ಪಾಲಿಕೆಯಲ್ಲಿ ಶ್ರದ್ಧಾಂಜಲಿ ಅರ್ಪಿಸುವ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಬಿಜೆಪಿ ಪಕ್ಷ ವಾಜಪೇಯಿ ಅವರಿಗೆ ಸಂತಾಪ ಸೂಚಿಸುವ ನಿಲುವಳಿಯನ್ನು ಮಂಡಿಸಿತು. ಆದರೆ, ಈ ನಿಲುವಳಿಗೆ ಎಂಐಎಂ ಕಾರ್ಪೊರೇಟರ್ಗಳು ವಿರೋಧಿಸಿದರು ಎನ್ನಲಾಗಿದೆ. ಇದರಿಂದ ತೀವ್ರ ಆಕ್ರೋಶಗೊಂಡ ಬಿಜೆಪಿ ಕಾರ್ಪೊರೇಟರ್ ಗಳು ಎಂಐಎಂ ಕಾರ್ಪೊರೇಟರ್ಗಳ ವಿರುದ್ಧ ತಿರುಗಿಬಿದ್ದಿದ್ದಾರೆ. ಹೀಗಾಗಿ ಪಾಲಿಕೆ ಸಭಾಂಗಣದಲ್ಲೇ ಜಟಾಪಟಿ ನಡೆದಿದೆ. ಕೊನೆಗೆ ಹೊಡೆದಾಟವೂ ಸಂಭವಿಸಿದೆ.
ಘಟನೆಯಲ್ಲಿ ಎಂಐಎಂನ ಸೈಯ್ಯದ್ ಮತೀನ್ ರಶೀದ್ ಎಂಬುವವರಿಗೆ ಬಿಜೆಪಿ ಕಾರ್ಪೊರೇಟರ್ ಗಳು ಚಪ್ಪಲಿ ಮತ್ತು ಕಾಲುಗಳಿಂದ ಒದ್ದು ತೀವ್ರವಾಗಿ ಥಳಿಸಿದ್ದಾರೆ. ಘಟನೆಯ ನಂತರ ಕೆಲ ಎಂಐಎಂ ಕಾರ್ಪೊರೇಟರ್ ಗಳು ಮತ್ತು ಕಾರ್ಯಕರ್ತರು ಬಿಜೆಪಿಯ ಕಾರ್ಪೊರೇಟರ್ ವೊಬ್ಬರ ಕಾರನ್ನು ಜಖಂಗೊಳಿಸಿದ್ದಾರೆ. ಈ ಕುರಿತು ಔರಂಗಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.