ದೇಶ

ಗೌರಿ ಲಂಕೇಶ್, ನರೇಂದ್ರ ದಾಬೋಲ್ಕರ್ ಹತ್ಯೆಗೂ ನಂಟು: ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ

Manjula VN
ನವದೆಹಲಿ: ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಹಾಗೂ ಮೂಢನಂಬಿಕೆ ವಿರೋಧಿ ಹೋರಾಟಗಾರ ಮಹಾರಾಷ್ಟ್ರದ ನರೇಂದ್ರ ದಾಭೋಲ್ಕರ್ ಹತ್ಯೆಗೂ ನಂಟುಗಳಿರುವ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. 
ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ತನಿಖೆ ವೇಳೆ ಡೈರಿಯೊಂದು ದೊರಕಿದ್ದು, ಡೈರಿಯಲ್ಲಿ ಸ್ಫೋಟಕ ಮಾಹಿತಿಗಳಿರುವುದಾಗಿ ತಿಳಿದುಬಂದಿದೆ. 
ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್ಐಟಿ) ಅಧಿಕಾರಿಗಳು ನೀಡಿದ ಮಾಹಿತಿಯನ್ನು ಆಧರಿಸಿ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಸಿಬಿಐ ಅಧಿಕಾರಿಗಳು ಕೆಲ ಮಾಹಿತಿಗಳನ್ನು ಸಂಗ್ರಹಿಸಿದ್ದು, ಈ ಮಾಹಿತಿಗಳ ಅನ್ವಯ ಶನಿವಾರ ಸಚಿನ್ ಪ್ರಕಾಶ್ ರಾವ್ ಅಂದುರೆ ಎಂಬಾತನನ್ನು ಬಂಧನಕ್ಕೊಳಪಡಿಸಿದ್ದಾರೆ. 
ಪ್ರಕರಣಕಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳಿಗೆ ಸ್ಫೋಟಕ ಮಾಹಿತಿಯೊಂದು ಡೈರಿಯಿಂದ ದೊರಕಿದೆ. 
ಗೈರಿ ಹತ್ಯೆ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ 12 ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗಿದ್ದು, ಈ ಎಲ್ಲಾ ಮಾಹಿತಿಗಳನ್ನು ಸಂಬಂಧಪಟ್ಟ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಎಸ್ಐಟಿ ಅಧಿಕಾರಿಗಳು ತಿಳಿಸಿದ್ದಾರೆ. 
ಡಾ ಎಂಎಂ ಕಲಬುರಗಿ, ಗೋವಿಂದ ಪನ್ಸಾರೆ ಮತ್ತು ನರೇಂದ್ರ ದಾಬೋಲ್ಕರ್ ಹತ್ಯೆ ಕುರಿತಂತೆ ಸಂಗ್ರಹಿಸಲಾಗಿರುವ ಮಾಹಿತಿಗಳನ್ನು ಹಂಚಿಕೊಳ್ಳಲಾಗಿದೆ. ಅಮೋಲ್ ಕಾಳೆ ಬಳಿ ವಶಕ್ಕೆ ಪಡೆಯಲಾಗಿದ್ದ ಡೈರಿಯಲ್ಲಿ ಅಂದುರೆ ಹೆಸರಿತ್ತು. ಧಾಬೋಲ್ಕರ್, ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಅಧಿಕಾರಿಗಳಿಂದಲೂ ಈ ಹೆಸರು ಕೇಳಿ ಬಂದಿತ್ತು ಎಂದು ತಿಳಿಸಿದ್ದಾರೆ. 
ಕೆಲ ಹಿಂದೂ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಕೆಲವರನ್ನು ಮಹಾರಾಷ್ಟ್ರ ರಾಜ್ಯದ ಉಗ್ರ ನಿಗ್ರಹ ಪಡೆ 10 ದಿನಗಳ ಹಿಂದಷ್ಟೇ ಬಂಧನಕ್ಕೊಳಪಡಿಸಿತ್ತು. ವೈಭವ್ ರಾವತ್, ಸುಧಾನ್ವಾ, ಗೊಂಡಾಲೆಕರ್ ಮತ್ತು ಶರದ್ ಕಸಲ್ಕರ್ ಎಂಬುವವರನ್ನು ಬಂಧನಕ್ಕೊಳಪಡಿಸಿತ್ತು. ಈ ವೇಳೆ ಹಲವು ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿತ್ತು. 
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್ಐಟಿ ಪೊಲೀಸರು ನೀಡಿದ ಮಾಹಿತಿ ಆಧರಿಸಿ ಮಹಾರಾಷ್ಟ್ರದಲ್ಲಿ ಎಟಿಎಸ್ ದಾಳಿ ನಡೆಸಿತ್ತು. ಈ ವೇಳೆ ಸಿಕ್ಕ ಸುಳಿವುಗಳಿಂದ ಅಮೋಲ್ ಕಾಳೆಗೆ ಗೊಂಡಾಲೆಕರ್ ಪಿಸ್ತೂಲ್ ನೀಡಿದ್ದಾನೆಂದು ಬಲವಾಗಿ ಶಂಕಿಸಿತ್ತು.  11 ಪಿಸ್ತೂಲ್ ಗಳ ಪೈಕಿ ಒಂದು ಗೌರಿ ಲಂಕೇಶ್ ಹತ್ಯೆಗೆ ಬಳಕೆ ಮಾಡಲಾಗಿದೆ. ಈ ಹಿಂದೆ ಇದೇ ರೀತಿಯ ಪಿಸ್ತೂಲ್ ನ್ನು ಡಾ. ಕಲಬುರಗಿ ಹ್ತೆಯ ಪ್ರಕರಣದಲ್ಲಿ ಬಳಕೆ ಮಾಡಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. 
ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯುತ್ತಿದೆ ಎಸ್ಐಟಿ
ಮಹಾರಾಷ್ಟ್ರ ಎಟಿಎಸ್ ಅಧಿಕಾರಿಗಳು ಸುಧಾನ್ವಾ ಗೊಂಡಾಲೆಕರ್ ನಿಂದ ಒಟ್ಟು 11 ದೇಶೀ ನಿರ್ಮಿತ ಪಿಸ್ತೂಲ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಈ ಪಿಸ್ತೂಲ್ ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದೆ. ಹೀಗಾಗಿ ವರಿದಿಗಾಗಿ ಕಾಯುತ್ತಿದೆ. ವರದಿ ಬಳಿಕ ಗೌರಿ ಲಂಕೇಶ್ ಹತ್ಯೆಗೆ ಬಳಸಲಾಗಿದ್ದ ಪಿಸ್ತೂಲ್'ನ್ನು ತಾಳೆ ಮಾಡಿ ನೋಡಲಾಗುತ್ತದೆ ಎಂದು ಎಸ್ಐಟಿ ಅಧಿಕಾರಿಯೊಬ್ಬರು ಹೇಳಿದ್ದಾರೆ. 
SCROLL FOR NEXT