ದೇಶ

ರಾಜೀವ್ ಗಾಂಧಿ 74ನೇ ಜಯಂತಿ; ಸೋನಿಯಾ ಗಾಂಧಿ, ರಾಹುಲ್ ಗಾಂಧಿಯಿಂದ ಗೌರವ ನಮನ

Sumana Upadhyaya

ನವದೆಹಲಿ: ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ 74ನೇ ಜಯಂತಿ ಇಂದು. ಈ ದಿನವನ್ನು ಸದ್ಭಾವನ ದಿನ ಎಂದು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಅವರ ಕುಟುಂಬದವರು ದೆಹಲಿಯ ವೀರಭೂಮಿಯಲ್ಲಿರುವ ರಾಜೀವ್ ಗಾಂಧಿ ಸಮಾಧಿ ಬಳಿ ತೆರಳಿ ಪುಷ್ಪ ನಮನ ಸಲ್ಲಿಸಿದರು.

ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ರಾಬರ್ಟ್ ವಾದ್ರಾ ಜತೆಯಾಗಿ ತೆರಳಿ ಪುಷ್ಪ ನಮನ ಸಲ್ಲಿಸಿದರು. ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್, ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಮತ್ತು ಅಶೋಕ್ ಗೆಹ್ಲೊಟ್ ಕೂಡ ಸಾಥ್ ನೀಡಿದ್ದರು.

ಆಗಸ್ಟ್ 20, 1944ರಂದು ಬಾಂಬೆ ಪ್ರಾಂತ್ಯದಲ್ಲಿ ಜನಿಸಿದ್ದ ರಾಜೀವ್ ಗಾಂಧಿಯವರು ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ 4 ಬಾರಿ ಸಂಸದರಾಗಿದ್ದರು. ದೇಶದ 7ನೇ ಪ್ರಧಾನಿಯಾಗಿ 1984ರಿಂದ 1989ರವರೆಗೆ ಸೇವೆ ಸಲ್ಲಿಸಿದ್ದರು. ಅವರ ತಾಯಿ ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ 1984ರಲ್ಲಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

ಅವರನ್ನು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ 1991ರ ಮೇ 21ರಂದು ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಹತ್ಯೆ ಮಾಡಲಾಯಿತು. ಅವರ ಕಳೇಬರವನ್ನು ಯಮುನಾ ನದಿ ತೀರದ ವೀರಭೂಮಿಯಲ್ಲಿ ದಹನ ಮಾಡಲಾಯಿತು.

SCROLL FOR NEXT