ನವದೆಹಲಿ: ಆಮ್ ಆದ್ಮಿ ಪಕ್ಷ(ಎಎಪಿ) ಯಿಂದ ಅಶುತೋಷ್ ರಾಜೀನಾಮೆ ಕೊತ್ಟು ಹೊರಬಂದ ಬೆನ್ನಲ್ಲೇ ಇನ್ನೋರ್ವ ನಾಯಕ, ಪತ್ರಕರ್ತ ಆಶಿಶ್ ಖೇತನ್ ತಾವು ಪಕ್ಷ ತೊರೆಯುವ ಸೂಚನೆ ನೀಡಿದ್ದಾರೆ.
ಖೇತನ್ ಟ್ವಿಟ್ ಮಾಡಿದ್ದು "ನಾನು ನನ್ನ ಕಾನೂನು ವ್ಯಾಸಂಗದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕೆಂದುಕೊಂಡಿದ್ದೇನೆ. ಹೀಗಾಗಿ ನಾನು ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲಾರೆ, ಉಳಿದೆಲ್ಲವೂ ಅಮುಖ್ಯ" ಎಂದಿದ್ದಾರೆ.
ಖೇತನ್ 2014 ರಲ್ಲಿ ಎಎಪಿ ಸೇರ್ಪಡೆಗೊಂಡಿದ್ದರು.ಅದೇ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸಹ ಸ್ಪರ್ಧಿಸಿದ್ದ ಇವರು ಭಾರತೀಯ ಜನತಾ ಪಕ್ಷದ ಮೀನಾಕ್ಷಿ ಲೇಖಿ ಎದುರು ಪರಾಭವಗೊಂಡರು.
ಮೂರು ವರ್ಷಗಳ ಹಿಂದೆ ಖೇತನ್ ದೆಹಲಿ ಸರ್ಕಾರದ ಸಲಹಾ ಮಂಡಳಿ - ದೆಹಲಿ ಸಂವಾದ ಮತ್ತು ಅಭಿವೃದ್ಧಿ ಆಯೋಗದ (ಡಿಡಿಸಿ) ಉಪಾಧ್ಯಕ್ಷರಾಗಿ ನೇಮಕವಾಗಿದ್ದರು. ಆದರೆ ಈ ವರ್ಷ ಏಪ್ರಿಲ್ ನಲ್ಲಿ ಈ ಹುದ್ದೆ ತೊರೆದಿದ್ದ ಖೇತನ್ ತಾವು ಕಾನೂನು ವ್ಯಾಸಂಗ ನಡೆಸಬೇಕೆಂದು ನಿರ್ಧರಿಸಿದ್ದಾಗಿ ಹೇಳಿಕೊಂಡಿದ್ದರು.
2019ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಆಶಿಶ್ ಖೇತನ್ ಅವರಿಗೆ ಪಕ್ಷ ಟಿಕೆಟ್ ನೀಡಲಿದೆ ಎಂದು ಮೂಲಗಳು ಹೇಳಿವೆ.