ನರೇಂದ್ರ ಮೋದಿ-ಮನ್ ಮೋಹನ್ ಸಿಂಗ್
ನವದೆಹಲಿ: ಕಂಡು ಕೇಳರಿಯದ ಜಲಪ್ರಳಯದಿಂದ ಕೇರಳ ತತ್ತರಿಸಿ ಹೋಗಿದೆ. ಇಂತಹ ಸಂದರ್ಭದಲ್ಲಿ ವಿದೇಶಗಳು ಕೇರಳ ಸಂತ್ರಸ್ತರಿಗೆ ನೆರವು ನೀಡಲು ಮುಂದೆ ಬರುತ್ತಿವೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಯುಎಇ ನೀಡಲಿರುವ 700 ಕೋಟಿ ನೆರವನ್ನು ತೆಗೆದುಕೊಳ್ಳದಿರುವ ನಿರ್ಧಾರಕ್ಕೆ ಬಂದಿರುವುದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ. ಭಾರತದಲ್ಲಿ ಸಂಭವಿಸುವ ಪ್ರಕೃತಿ ವಿಕೋಪಗಳಿಗೆ ವಿದೇಶಿ ನೆರವು ಬೇಡ ಎಂಬ ಕೇಂದ್ರ ಸರ್ಕಾರದ ನಿರ್ಧಾರ ಪ್ರಧಾನಿ ನರೇಂದ್ರ ಮೋದಿ ಅವರದ್ದಲ್ಲ. ಬದಲಿಗೆ ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಅವರದ್ದು, 2004ರ ಡಿಸೆಂಬರ್ ನಲ್ಲಿ ಸಂಭವಿಸಿದ ಸುನಾಮಿಯ ವೇಳೆ ಅಂದಿನ ಪ್ರಧಾನಿ ಮನ್ ಮೋಹನ್ ಸಿಂಗ್ ತೆಗೆದುಕೊಂಡ ನಿಲುವು.
2004ರಿಂದ ಇಲ್ಲಿಯವರೆಗೂ ದೇಶದಲ್ಲಿ ಯಾವುದೇ ಪ್ರಕೃತಿ ವಿಕೋಪದಿಂದಾದ ಹಾನಿಗೆ ವಿದೇಶಿ ನೆರವನ್ನು ಭಾರತ ಪಡೆದಿಲ್ಲ. ಇನ್ನು 2004ಕ್ಕೂ ಹಿಂದೆ ಸಾಕಷ್ಟು ವಿದೇಶಿ ನೆರವು ಪಡೆಯುತ್ತಿತ್ತು. 1991ರ ಉತ್ತರಕಾಶಿಯ ಭೂಕಂಪ, 1993ರ ಲಾತೂರ್ ಭೂಕಂಪ, 2001ರ ಗುಜರಾತ್ ಭೂಕಂಪ, 2002ರ ಪಶ್ಚಿಮ ಬಂಗಾಳದ ಚಂಡಮಾರುತ, 2004ರ ಬಿಹಾರದ ನೆರಹಾನಿ ಹೀಗೆ ಸಾಕಷ್ಟು ಬಾರಿ ಭಾರತ ವಿದೇಶಗಳಿಂದ ನೆರವು ಸ್ವೀಕರಿಸಿತ್ತು. ಅದೇ ರೀತಿ ಸುನಾಮಿಯ ಸಂದರ್ಭದಲ್ಲೂ ಅನೇಕ ದೇಶಗಳು ನೆರವು ನೀಡಲು ಮುಂದೆ ಬಂದವು, ಆದರೆ ಆಗ ಕೇಂದ್ರ ಸರ್ಕಾರ ತನ್ನ ಪ್ರಕೃತಿ ವಿಕೋಪ ನೀತಿಯನ್ನು ಬದಲಿಸಿಕೊಂಡಿತು.
2004ರಲ್ಲಿ ಸಂಭವಿಸಿದ್ದ ಸುನಾಮಿ ವೇಳೆ ಮನ್ ಮೋಹನ್ ಸಿಂಗ್ ಅವರು ನೀಡಿದ ಹೇಳಿಕೆ ಪ್ರಸಿದ್ಧವಾಗಿತ್ತು. ನಮ್ಮಲ್ಲಾದ ಹಾನಿಯನ್ನು ಸರಿಪಡಿಸಿಕೊಳ್ಳಲು ನಾವು ಶಕ್ತರಾಗಿದ್ದೇವೆ. ಅಗತ್ಯಬಿದ್ದರೆ ಮಾತ್ರ ಬೇರೆಯವರ ನೆರವು ಪಡೆಯುತ್ತೇವೆ. ಅಂದಿನಿಂದ ಭಾರತ ಬೇರೆ ದೇಶಗಳಿಗೆ ನೆರವು ನೀಡಲು ಆರಂಭಿಸಿ, ನೆರವು ಸ್ವೀಕರಿಸುವುದನ್ನು ನಿಲ್ಲಿಸಿತ್ತು.
ವಿದೇಶಿ ನೆರವು ಪಡೆಯದಿರುವುದಕ್ಕೆ ವಿದೇಶಾಂಗ ನೀತಿ ಮತ್ತು ರಾಜತಾಂತ್ರಿಕ ನಡೆಗಳಿಗೆ ಪೂರಕವಾದ ಕೆಲ ಸೂಕ್ಷ್ಮ ವಿಚಾರಗಳಿರುತ್ತವೆ. ಅದೇನೆದಂರೇ ನಮ್ಮಲ್ಲಾದ ಹಾನಿ ಸರಿಪಡಿಸಿಕೊಳ್ಳಲು ನಾವು ಶಕ್ತರಿದ್ದೇವೆ ಎಂಬ ಸಂದೇಶ ರವಾನಿಸುವುದರಿಂದ ಭಾರತದ ಆರ್ಥಿಕತೆ ಬಲಿಷ್ಠವಾಗಿದೆ ಎಂದು ಜಗತ್ತಿಗೆ ಹೇಳಿದಂತಾಗುತ್ತದೆ. ಇದು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ದೇಶದ ತೂಕವನ್ನು ಹೆಚ್ಚಿಸುತ್ತದೆ.