ಕೇರಳದಲ್ಲಿ ಕೋಮುಸೌಹಾರ್ದತೆ: ಜಲಾವೃತಗೊಂಡ ಮಸೀದಿ, ಹಿಂದೂ ದೇವಾಲಯದಲ್ಲಿ ಈದ್ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮ್ ಬಾಂಧವರು
ಕೇರಳದ ಹಿಂದೂಗಳು ಕೋಮುಸೌಹಾರ್ದತೆ ಮೆರೆದಿದ್ದು, ಮಸೀದಿ ಜಲಾವೃತಗೊಂಡಿದ್ದರಿಂದ ಮುಸ್ಲಿಂ ಸಮುದಾಯದವರಿಗೆ ದೇವಾಲಯದಲ್ಲೇ ಈದ್ ಪ್ರಾರ್ಥನೆ ಸಲ್ಲಿಸುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇರವಥೂರ್ ನಲ್ಲಿರುವ ಎಸ್ ಎನ್ ಡಿಪಿ ನಡೆಸುತ್ತಿರುವ ಪುರಪುಲ್ಲಿಕಾವು ರತ್ನೇಶ್ವರಿ ದೇವಾಲಯದಲ್ಲಿ ಆ.22 ರಂದು ಈದ್ ಪ್ರಾರ್ಥನೆ ಸಲ್ಲಿಸುವುದಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಕೋಮುಸಾಮರಸ್ಯದ ಆದರ್ಶ ಪಾಲನೆಯಾಗಿದೆ.
ಕೊಚುಕಡವು ಬಳಿ ಇರುವ ಜುಮಾ ಮಸೀದಿ ಸಂಪೂರ್ಣವಾಗಿ ಜಲಾವೃತಗೊಂಡಿದ್ದ ಹಿನ್ನೆಲೆಯಲ್ಲಿ ಈದ್ ಪ್ರಾರ್ಥನೆ ಸಲ್ಲಿಸುವುದಕ್ಕೆ ಅಲ್ಲಿನ ಮೌಲ್ವಿ ಬೇರೆ ಸ್ಥಳವನ್ನು ಹುಡುಕುತ್ತಿದ್ದರು. ಇದನ್ನು ಅರಿತ ದೇವಾಲಯದ ಸಿಬ್ಬಂದಿಗಳು, ದೇವಾಲಯದ ಭಾಗವಾಗಿರುವ ವಿಶಾಲವಾದ ಹಾಲ್ ನ್ನು ಪ್ರಾರ್ಥನೆ ಮಾಡುವುದಕ್ಕೆ ಮುಸ್ಲಿಂ ಬಾಂಧವರಿಗೆ ಬಿಟ್ಟುಕೊಟ್ಟಿದ್ದಾರೆ.
ಜಲಾವೃತಗೊಂಡಿದ್ದ ಮಸೀದಿ ಬುಧವಾರದ ವೇಳೆಗೆ ಸಹಜ ಸ್ಥಿತಿಗೆ ಮರಳುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಹಾಗಾಗಲಿಲ್ಲ. ಈ ವಿಷಯ ದೇವಾಲಯದ ಸಿಬ್ಬಂದಿಗೂ ತಿಳಿಯಿತು. ತಕ್ಷಣವೇ ನಮಗೆ ಈದ್ ಪ್ರಾರ್ಥನೆ ಸಲ್ಲಿಸುವುದಕ್ಕೆ ದೇವಾಲಯದಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದು ಮಸೀದಿಯ ಸಮಿತಿಯ ಅಧ್ಯಕ್ಷ ಪಿಎ ಖಾಲೀದ್ ಸಂತಸ ವ್ಯಕ್ತಪಡಿಸಿದ್ದಾರೆ. ದೇವಾಲಯದ ಸಿಬ್ಬಂದಿಗಳದ ಕ್ರಮದಿಂದಾಗಿ ಸುಮಾರು 200 ಕ್ಕೂ ಹೆಚ್ಚು ಮುಸ್ಲಿಮರು ದೇವಾಲಯದಲ್ಲಿ ಈದ್ ಪ್ರಾರ್ಥನೆ ಸಲ್ಲಿಸಿ ಸಂತಸದಿಂದ ವಾಪಸ್ ತೆರಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos