ದೇಶ

ಗೋರಖ್ ಪುರ ದುರಂತಕ್ಕೆ ಆಮ್ಲಜನಕ ಕೊರತೆಯಲ್ಲ, ಆಂತರಿಕ ರಾಜಕೀಯ ಕಾರಣ: ಸಿಎಂ ಯೋಗಿ ಆದಿತ್ಯನಾಥ್

Srinivasamurthy VN
ಗೋರಖ್ ಪುರ: ಗೋರಖ್ ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದ ಮಕ್ಕಳ ಸರಣಿ ಸಾವಿನ ಪ್ರಕರಣಕ್ಕೆ ಆಮ್ಲಜನಕದ ಕೊರತೆಯಲ್ಲ, ಬದಲಿಗೆ ಆಸ್ಪತ್ರೆಯಲ್ಲಿನ ಆಂತರಿಕ ರಾಜಕೀಯ ಕಾರಣ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಹೇಳಿದ್ದಾರೆ.
ಶನಿವಾರ ಲಖ್ನೋದಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಆದಿತ್ಯನಾಥ್, ದುರಂತವು ಆಮ್ಲಜನಕದ ಕೊರತೆಯಿಂದ ನಡೆದಿರಲಿಲ್ಲ. ಬದಲಿಗೆ ಆಸ್ಪತ್ರೆಯ ಆಂತರಿಕ ರಾಜಕೀಯದ ಪರಿಣಾಮವಾಗಿ ಸಂಭವಿಸಿತ್ತು ಎಂದು ಹೇಳಿದ್ದಾರೆ. 'ಘಟನೆಯ ಮಾಹಿತಿ ಪಡೆದ ಕೂಡಲೆ ನಾನು ಪ್ರಧಾನ ಆರೋಗ್ಯ ನಿರ್ದೇಶಕ, ಆರೋಗ್ಯ ಸಚಿನ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಿಗೆ ಸ್ಥಳಕ್ಕೆ ತೆರಳುವಂತೆ ಸೂಚಿಸಿದೆ ಮತ್ತು ನನಗೆ ಮಾಹಿತಿ ನೀಡುತ್ತಿರುವಂತೆ ತಿಳಿಸಿದೆ. ಮರುದಿನ ನಾನೇ ಖುದ್ದಾಗಿ ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿದಾಗ ಅಲ್ಲಿ ಆಮ್ಲಜನಕದ ಕೊರತೆಯಿರಲಿಲ್ಲ ಎಂಬುದು ತಿಳಿದುಬಂತು. ಒಂದು ವೇಳೆ ಆಮ್ಲಜನಕದ ಕೊರತೆ ಇದ್ದಿದ್ದರೆ ಮೊದಲಿಗೆ ವೆಂಟಿಲೇಟರ್ ನಲ್ಲಿದ್ದ ಮಕ್ಕಳು ಸಾವನ್ನಪ್ಪ ಬೇಕಿತ್ತು ಎಂದು ಆದಿತ್ಯನಾಥ್ ತಿಳಿಸಿದ್ದಾರೆ.
2017ರ ಆಗಸ್ಟ್‌ ನಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ದುರಂತದಲ್ಲಿ 60 ಮಕ್ಕಳು ಸಾವನ್ನಪ್ಪಿದ್ದರು. ಆಸ್ಪತ್ರೆಯು ಬಿಲ್ ಪಾವತಿಸದ ಕಾರಣ ಆಮ್ಲಜನಕ ಸರಬರಾಜು ಕಡಿತಗೊಳಿಸಿದ್ದೇ ಘಟನೆಗೆ ಕಾರಣ ಎಂದು ಆರೋಪಿಸಲಾಗಿತ್ತು. ಆದರೆ ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಈ ಆರೋಪವನ್ನು ತಳ್ಳಿಹಾಕಿತ್ತು. ಘಟನೆಗೆ ಸಂಬಂಧಪಟ್ಟಂತೆ ಬಿಆರ್ ಡಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಕಫೀಲ್ ಖಾನ್ ರನ್ನು ಪೊಲೀಸರು ಬಂಧಿಸಿದ್ದರು. ಸದ್ಯ ಅವರನ್ನು ಬಿಡುಗಡೆಗೊಳಿಸಲಾಗಿದೆ. ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿರುವ ಪೊಲೀಸರು ಮೂವರು ವೈದ್ಯರು ಸೇರಿದಂತೆ ಎಲ್ಲ ಒಂಬತ್ತು ಮಂದಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧಪಡಿಸಿದ್ದಾರೆ.
SCROLL FOR NEXT