ಹೈದರಾಬಾದ್: ಬಂಧನ ಮತ್ತು ನಮ್ಮ ಮನೆಯ ಮೇಲೆ ಪೊಲೀಸ್ ದಾಳಿ ಹೊಸ ವಿಚಾರ ಏನಲ್ಲ. ಆದರೆ ನಮ್ಮ ಕುಟುಂಬವನ್ನು ಟಾರ್ಗೆಟ್ ಮಾಡುತ್ತಿರುವುದು ನಮಗೆ ಹೊಸದು ಎಂದು ಬಂಧಿತ ಎಡಪಂಥೀಯ ಬಗ್ಗೆ ಸಹಾನುಭೂತಿ ಹೊಂದಿರುವ ಕ್ರಾಂತಿಕಾರಿ ಬರಹಗಾರ ಪೆಂದ್ಯಾಲ ವರವರ ರಾವ್ ಅವರ ಪತ್ನಿ ಹೇಮಲತಾ ಅವರು ಹೇಳಿದ್ದಾರೆ.
ಪತಿ ರಾವ್ ಬಂಧನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೇಮಲತಾ, ನನ್ನ ಪತಿಯನ್ನು ಬಂಧಿಸಿರುವುದು ಇದೇ ಮೊದಲು. ಅಲ್ಲದೆ ಏನೂ ಗೊತ್ತಿಲ್ಲದ ನಮ್ಮ ಮಕ್ಕಳು ಮತ್ತು ಅಳಿಯಂದಿರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಇಎಫ್ ಎಲ್ ಯು ನಲ್ಲಿ ಶಿಕ್ಷಕರಾಗಿರುವ ನನ್ನ ಅಳಿಯನಿಗೆ ಏನು ಗೊತ್ತಿರುತ್ತೇ ಹೇಳಿ? ಎಂದು ಪ್ರಶ್ನಿಸಿದ್ದಾರೆ.
ಇಂದು ಬೆಳಗ್ಗೆ 8.30ರ ಸುಮಾರಿಗೆ 20 ಪೊಲೀಸರು ನಮ್ಮ ಮನೆಗೆ ಆಗಮಿಸಿದ್ದರು. ಎಲ್ಲರೂ ಮರಾಠಿ ಮಾತನಾಡುತ್ತಿದ್ದರು. ಆದರೆ ನಮ್ಮೊಂದಿಗೆ ಹಿಂದಿ ಮಾತನಾಡಿದರು. ಅವರಲ್ಲಿ ಒಬ್ಬರು ನಗರ ಪೊಲೀಸ್ ಇನ್ಸ್ ಪೆಕ್ಟರ್ ಆಗಿದ್ದರು. ಅವರು ನಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಳ್ಳಲಿಲ್ಲ ಎಂದು ಹೇಮಲತಾ ತಿಳಿಸಿದ್ದಾರೆ.
ನನ್ನ ಪತಿ ವಿರುದ್ಧ ಸುಮಾರು 20 ಕೇಸ್ ಗಳಿದ್ದವು. ಆ ಎಲ್ಲಾ ಪ್ರಕರಣಗಳಲ್ಲೂ ಅವರು ಖುಲಾಸೆಯಾಗಿದ್ದಾರೆ. ಈ ದಾಳಿ ಮತ್ತು ಬಂಧನ ನಮಗೆ ಹೊಸದಲ್ಲಿ. ಆದರೆ ಈ ಬಾರಿ ನಮ್ಮ ಕುಟುಂಬವನ್ನು ಟಾರ್ಗೆಟ್ ಮಾಡಿದ್ದಾರೆ ಎಂದರು.
ಈ ಪ್ರಕರಣದ ಬಗ್ಗೆಯೂ ನನಗೆ ಭಯ ಇಲ್ಲ. ಇದು ಸಹ ಸುಳ್ಳು ಪ್ರಕರಣ. ಅವರು ಖುಲಾಸೆಯಾಗುತ್ತಾರೆ. ಆದರೆ ಅವರ ಆರೋಗ್ಯದ ಬಗ್ಗೆ ನಮಗೆ ಚಿಂತೆ ಇದೆ. ಅವರಿಗೆ ಈಗ 78 ವರ್ಷ, ಬಿಪಿ ಮತ್ತು ಕೆಲ ಸಮಸ್ಯೆಗಳಿವೆ ಎಂದು ಹೇಮಲತಾ ಕಳವಳ ವ್ಯಕ್ತಪಡಿಸಿದ್ದಾರೆ.