ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆರ್ ಎಸ್ ಎಸ್ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ತೆರಳುವ ಮಾತೇ ಇಲ್ಲ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಮೂರು ದಿನಗಳ ಆರ್ ಎಸ್ ಎಸ್ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಮಲ್ಲಿಕಾರ್ಜುನ ಖರ್ಗೆ ಅವರು, ಇಂತಹ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅವರು ಆಹ್ವಾನ ನೀಡಿದರೂ ರಾಹುಲ್ ಕಾರ್ಯಕ್ರಮಕ್ಕೆ ತೆರಳುವುದಿಲ್ಲ ಎಂದು ಖರ್ಗೆ ಹೇಳಿದ್ದಾರೆ.
'ಆರ್ ಎಸ್ ಎಸ್ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಿರುವ ವಿಚಾರ ಮಾಧ್ಯಮಗಳಲ್ಲಿ ಮಾತ್ರ ಪ್ರಸಾರವಾಗುತ್ತಿದೆ. ಆದರೆ ನಮಗಿನ್ನೂ ಅಹ್ವಾನದ ಪ್ರತಿ ದೊರೆತಿಲ್ಲ. ಒಂದು ವೇಳೆ ದೊರೆತರೂ ರಾಹುಲ್ ಕಾರ್ಯಕ್ರಮಕ್ಕೆ ತೆರಳುವುದಿಲ್ಲ. ಆರ್ ಎಸ್ ಎಸ್ ತನ್ನ ಪ್ರತೀಯೊಂದು ಕಾರ್ಯಕ್ರಮವನ್ನೂ 2019ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸುತ್ತಿವೆ. ಹೀಗಾಗಿ ಆರ್ ಎಸ್ ಎಸ್ ಕಾರ್ಯಕ್ರಮಕ್ಕೆ ತೆರಳುವ ಪ್ರಶ್ನೆಯೇ ಇಲ್ಲ.
ಇದೇ ಕಾರಣಕ್ಕೆ ಕರ್ನಾಟಕದಲ್ಲೂ ಕೇಸರಿ ಪಡೆ ಅಧಿಕಾರಕ್ಕೆ ಬರಬಾರದು ಎಂಬ ಒಂದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಸಿಎಂ ಸ್ಥಾನ ತೊರೆದಿದೆ. ಹೀಗಿರುವಾಗ ಇಂತಹ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಖರ್ಗೆ ಹೇಳಿದ್ದಾರೆ.