ದೇಶ

'ದಿಲ್ಲಿ ಚಲೋ': ವಿಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಯ್ತು ರೈತರ ಬೃಹತ್ ರ್ಯಾಲಿ

Manjula VN
ನವದೆಹಲಿ: ಸಾಲಮನ್ನಾ, ಉತ್ಪನ್ನಗಳಿಗೆ ಲಾಭದಾಯಕ ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ರೈತರು ರಾಜಧಾನಿ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದು, ರೈತರ ಈ ಬೃಹತ್...
ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ರೈತರು ನಿನ್ನೆ ಬೃಹತ್ ಪ್ರತಿಭಟನೆ ನಡೆಸಿದ್ದರು. ದೆಹಲಿಯ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ಸಂಸತ್ತಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ತಡೆಯುವ ಮೂಲಕ ಪ್ರತಿಭಟನೆ ಅಂತ್ಯಗೊಂಡಿತ್ತು. 
ರೈತರ ಪ್ರತಿಭಟನೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಎನ್'ಸಿಪಿ ಮುಖ್ಯಸ್ಥ ಶರದ್ ಪವಾರ್ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳ ನಾಯಕರು ಸಾಥ್ ನೀಡುವ ಮೂಲಕ, ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಬಿಜೆಪಿಯೇತರ ಪಕ್ಷಗಳ ಶಕ್ತಿ ಪ್ರದರ್ಶನಕ್ಕೂ ರೈತರ ಪ್ರತಿಭಟನೆ ವೇದಿಕೆಯಾಯಿತು. 
207 ರೈತ ಸಂಘಟನೆಗಳ ಒಕ್ಕೂಟವಾಗಿರುವ ಅಖಿಲ ಭಾರತ ಕಿಸಾನ್ ಸಂಘರ್ಷ ಸಹಕಾರ ಸಮಿತಿ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಕರ್ನಾಟಕವೂ ಸೇರಿದಂತೆ ದೇಶದ ಒಟ್ಟು 24 ರಾಜ್ಯಗಳ ಸಾವಿರಾರು ರೈತರು ಪಾಲ್ಗೊಂಡಿದ್ದರು. ದೇಶದ ಮೂಲೆ ಮೂಲೆಗಳಿಂದ ರಾತ್ರೋರಾತ್ರಿ ರೈಲು, ಬಸ್ಸು ಹಾಗೂ ಇತರ ವಾಹನಗಳ ಮೂಲಕ ದೆಹಲಿಗೆ ಆಗಮಿಸಿದ್ದ ಸಾವಿರಾರು ರೈತರು ಗುರುವಾರ ರಾಮಲೀಲಾ ಮೈದಾನದಲ್ಲಿ ಜಮಾವಣೆಗೊಂಡಿದ್ದರು. ಶುಕ್ರವಾರ 10.30ಕ್ಕೆ ಸಂಸತ್ ಚಲೋ ನಡೆಸಿದ್ದ ರೈತರು ಸಂಸತ್ ಮಾರ್ಗ ಪೊಲೀಸ್ ಠಾಣೆಯ ಬಳಿ ತಡೆಯಲಾಯಿತು. 
ಎರಡು ದಿನಗಳ ರೈತರ ರ್ಯಾಲಿ ದೆಹಲಿಯಲ್ಲಿ ನಡೆದ ಅತಿದೊಡ್ಡ ರೈತ ಸಮಾವೇಶವಾಗಿದೆ ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಹಕಾರ ಸಮಿತಿ ಹೇಳಿಕೊಂಡಿದೆ. 
ದೆಹಲಿಗೆ ಬಂದ ರೈತರಿಗೆ 5 ಗುರುದ್ವಾರಗಳಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಜೊತೆಗೆ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ರೈತರಿಗೆ ಬೆಂಬಲ ಸೂಚಿಸಿದ್ದರು. ಅಲ್ಲದೇ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಾರಿ ಪ್ರಮಾಣದಲ್ಲಿ ರೈತರ ಮಹಿಳೆಯರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 
ವೈದ್ಯರು, ವೃತ್ತಿಪರರು, ಕಲಾವಿದರು, ವಕೀಲರು ಸೇರಿದಂತೆ ವಿವಿಧ ವರ್ಗಗಳ ಜನರು ಸ್ವಯಂ ಸೇವಕರಾಕಿ ರೈತರಿಗೆ ನೆರವು ನೀಡಿದ್ದರು. ಸುಮಾರು 600ರಿಂದ 700 ಸ್ವಯಂ ಸೇವಕರು ನೇಷನ್ ಫಾರ್ ಫಾರ್ಮರ್ ಎಂಬ ಗುಂಪು ರಚಿಸಿಕೊಂಡು ರೈತರ ಪ್ರತಿಭಟನೆಗೆ ಸಾಥ್ ನೀಡಿದರು. 
SCROLL FOR NEXT