ಕೋಲ್ಕತಾ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಸುಗ್ರೀವಾಜ್ಞೆ ಕುರಿತು ಕೇಂದ್ರ ಸರ್ಕಾರ ಪ್ರಸ್ತುತ ಯಾವುದೇ ರೀತಿಯ ಚಿಂತನೆಗಳನ್ನೂ ನಡೆಸುತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಅವರು ಹೇಳಿದ್ದಾರೆ.
ಅಯೋಧ್ಯೆ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಮಂದಿರ ನಿರ್ಮಾಣ ಮಾಡುವ ಕುರಿತ ಸುಗ್ರೀವಾಜ್ಞೆ ಬಗ್ಗೆ ಪ್ರಸ್ತುತ ಸರ್ಕಾರ ಯಾವುದೇ ರೀತಿಯ ಚಿಂತನೆಗಳನ್ನೂ ನಡೆಸುತ್ತಿಲ್ಲ. ಆದರೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ತಾಕತ್ತು ಇರುವುದು ಬಿಜೆಪಿಗೆ ಮಾತ್ರ ಎಂದು ಹೇಳಿದ್ದಾರೆ.
ಮಂದಿರ ವಿವಾದ ಒಳ್ಳೆಯದ್ದಕ್ಕಿಂತಲೂ ಹೆಚ್ಚು ಹಾನಿಯನ್ನೇ ಮಾಡುತ್ತದೆ. ಬಿಜೆಪಿಗೆ ಸಂಬಂಧಿಸಿದ್ದ ವಿಚಾರವನ್ನು ಅಲ್ಪಸಂಖ್ಯಾತರ ಮತಗಳನ್ನು ಕಸಿಯಲು ವಿರೋಧ ಪಕ್ಷಗಳು ಬಳಸಿಕೊಳ್ಳುತ್ತಿವೆ. ವಿವಾದ ಸಂಬಂಧ ನ್ಯಾಯಾಲಯದ ತೀರ್ಪಿಗಾಗಿ ನಾವು ಕಾಯುತ್ತಿದ್ದೇವೆ. ವಿವಾದ ನ್ಯಾಯಾಲಯದ ಅಂಗಳದಲ್ಲಿದ್ದಾಗ ನಾವು ಆತುರ ಪಡಬಾರದು. ನಿರ್ಧಾರ ಕೈಗೊಳ್ಳಲು ನ್ಯಾಯಾಲಯಕ್ಕೆ ಸಮಯ ನೀಡಬೇಕು. ಆದರೆ, ಜನರ ನಿರೀಕ್ಷೆಗಳು ಹೆಚ್ಚಾಗುತ್ತಲೇ ಇದೆ. ಸುಗ್ರೀವಾಜ್ಞೆ ಬಗ್ಗೆ ಸರ್ಕಾರ ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಿದೆ. ಆಧರೆ, ಪ್ರಸ್ತುತವಂತೂ ಸರ್ಕಾರ ಈ ಬಗ್ಗೆ ಯಾವುದೇ ರೀತಿಯ ಚಿಂತನೆಗಳನ್ನೂ ನಡೆಸುತ್ತಿಲ್ಲ ಎಂದು ತಿಳಿಸಿದ್ದಾರೆ.