ನವದೆಹಲಿ: ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇರುವಾಗ ಬ್ರಾಂಡ್ ಮೋದಿ ಪದ ಹೆಚ್ಚು ಕೇಳಿಬರುತ್ತಿದೆ. ಆದರೆ 2014ರಲ್ಲಿ ಇದ್ದಂತೆ ಈಗ ಬಿಜೆಪಿ ಪಕ್ಷಕ್ಕೆ ಮತ್ತು ಕೇಂದ್ರ ಸರ್ಕಾರದ ಹಲವು ಯೋಜನೆಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಮತ್ತು ಪ್ರಗತಿ ಕಂಡುಬಂದಿಲ್ಲ. ಇದು ಬಿಜೆಪಿಯ ಆಂತರಿಕ ಸಮೀಕ್ಷೆಯಿಂದಲೇ ತಿಳಿದುಬಂದಿದೆ.
ಇತ್ತೀಚೆಗೆ ದೆಹಲಿಯಲ್ಲಿ ಸುಮಾರು 34 ಸಾವಿರ ಮಂದಿಯಲ್ಲಿ ಮಾದರಿಯ ಸಮೀಕ್ಷೆಯನ್ನು ಸುಮಾರು 4 ತಿಂಗಳ ಕಾಲ ನಡೆಸಲಾಗಿತ್ತು. ಬಿಜೆಪಿಯ ಸಾಂಪ್ರದಾಯಿಕ ಮತದಾರರ ಗುಂಪಿನಲ್ಲಿ ಈಗಲೂ ಮೋದಿಯನ್ನು ಹೊಗಳುವವರು ಇದ್ದಾರೆ. ಆದರೆ ಸರಾಸರಿ ಶೇಕಡಾ 50ಕ್ಕಿಂತ ಹೆಚ್ಚು ಬೆಂಬಲಿಗರು ಇರುತ್ತಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಕಿಕೊಂಡ ಗುರಿಯ ಮಟ್ಟಕ್ಕೆ ಬೆಂಬಲ ಸಿಕ್ಕಿಲ್ಲ.
ಕಳೆದ ಜುಲೈಯಿಂದ ಅಕ್ಟೋಬರ್ ವರೆಗೆ ನಡೆಸಲಾದ ಸಮೀಕ್ಷೆಯಲ್ಲಿ 2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕೆಂದು ಶೇಕಡಾ 59 ಮಂದಿ ಮತ ಹಾಕಿದ್ದರೆ, ಮುಂದಿನ ವರ್ಷ ಅವರು ಪ್ರಧಾನಿಯಾಗಬೇಕೆಂದು ಶೇಕಡಾ 63ರಷ್ಟು ಜನ ಒಲವು ತೋರಿಸಿದ್ದಾರೆ. ಈ ಪ್ರಮಾಣ ಜಾಸ್ತಿಯಾಗಿದ್ದರೂ ಕೂಡ ಕೇಂದ್ರ ಸರ್ಕಾರದ ಕೆಲವು ಯೋಜನೆಗಳು ವಿಫಲವಾಗಿವೆ. ಸಮೀಕ್ಷೆಗೊಳಪಟ್ಟ ಜನರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಮತ ಹಾಕಲು ಪ್ರಧಾನ ಮಂತ್ರಿ ಅಭ್ಯರ್ಥಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಹೇಳಿದರೆ ಕಾಲು ಭಾಗದಷ್ಟು ಮಂದಿ ಪಕ್ಷವನ್ನು ಆಧಾರವಾಗಿಟ್ಟುಕೊಂಡು ಮತ ಹಾಕುತ್ತೇವೆ ಎನ್ನುತ್ತಾರೆ.
ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮದಿಂದ ಜನರ ಜೊತೆ ಸಂವಾದ ಮಾಡಲು, ಕೇಂದ್ರ ಸರ್ಕಾರದ ಯೋಜನೆಗಳು ಪ್ರಧಾನಿ ಮೋದಿಯವರಿಗೆ ವೈಯಕ್ತಿಕವಾಗಿ ತಮ್ಮ ಕ್ಷೇತ್ರದಲ್ಲಿ ಸಹಾಯವಾಗಿದೆ ಎನ್ನಬಹುದು. ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮದಲ್ಲಿ ಅವರು ಮಾತನಾಡುವ ಸಾಮಾಜಿಕ ವಿಷಯಗಳು ಅವರಿಗೆ ಹೊಸ ಬೆಂಬಲವನ್ನು ನೀಡಿದೆ. ಅದು ಬಿಜೆಪಿಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸಹಾಯವಾಗಬಹುದು ಎಂದು ಹೇಳಲಾಗುತ್ತಿದೆ.
ಆದರೆ ಎನ್ ಡಿಎ ಸರ್ಕಾರದ ಅಧಿಕ ಮೌಲ್ಯದ ನೋಟುಗಳ ನಗದೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆ ಜಾರಿ ವರದಾನವಾಗಿಲ್ಲ. ಶೇಕಡಾ 48 ಮಂದಿ ಸರ್ಕಾರದ ಕೆಟ್ಟ ನಿರ್ಧಾರ ಎಂದು ಹೇಳಿದರೆ ಶೇಕಡಾ 29 ಮಂದಿ ಮಾತ್ರ ಉತ್ತಮ ಆಯ್ಕೆ ಎಂದಿದ್ದಾರೆ.
ಸ್ವಚ್ಛ ಭಾರತ ಅಭಿಯಾನ ವೈಫಲ್ಯವಾಗಿದ್ದು, ಕೇಂದ್ರದ ಯೋಜನೆಗಳಾದ ಜೀವನ್ ಜ್ಯೋತಿ ಭೀಮಾ, ಉಜ್ವಲ, ಸ್ಟಂಟ್ ಗಳ ಬೆಲೆ ಇಳಿಕೆ ಯಶಸ್ಸು ಕಂಡಿದೆ. ಜೀವನ್ ಜ್ಯೋತಿ ಭೀಮಾ ಯೋಜನೆಗೆ ಶೇಕಡಾ 45ರಷ್ಟು ಮಂದಿ ಉತ್ತಮ ಪ್ರತಿಕ್ರಿಯಿಸಿದ್ದರೆ, ಉಜ್ವಲ ಯೋಜನೆಗೆ ಶೇಕಡಾ 53ರಷ್ಟು ಮಂದಿ ಒಲವು ತೋರಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಪ್ರಧಾನಿ ಮೋದಿಯವರ ಜನಪ್ರಿಯತೆ ಹೆಚ್ಚಾಗಿದೆ. ಶೇಕಡಾ 65ರಷ್ಟು ಮಂದಿ ಅನಿವಾಸಿ ಭಾರತೀಯರು ಕೇಂದ್ರ ಸರ್ಕಾರದ ಕಾರ್ಯವೈಖರಿ, ಯೋಜನೆಗಳಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.