ಮಧ್ಯಪ್ರದೇಶದಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು, ಕಾಂಗ್ರೆಸ್-ಬಿಜೆಪಿ ನಡುವೆ ನೇರಾ ನೇರ ಪೈಪೋಟಿಯನ್ನು ಅಂದಾಜಿಸಿದೆ. ಈ ನಡುವೆ ತಮ್ಮನ್ನು ತಾವೇ ದೊಡ್ಡ ವಿಶ್ಲೇಷಕ ಎಂದು ಹೇಳಿಕೊಂಡಿರುವ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಈ ಬಾರಿ ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲುವು ಖಚಿತ ಎಂದಿದ್ದಾರೆ.
ನಾನು ದಿನದ ಬಹುತೇಕ ಸಮಯ ಸಾರ್ವಜನಿಕರೊಂದಿಗೇ ಕಳೆಯುತ್ತೇನೆ ಆದ್ದರಿಂದ ನಾನೇ ದೊಡ್ಡ ಚುನಾವಣಾ ವಿಶ್ಲೇಷಕ, ಬಿಜೆಪಿ ಸತತ ನಾಲ್ಕನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂದು ಡಾಟಿಯಾದಲ್ಲಿರುವ ಶ್ರೀ ಪೀತಾಂಬರ ಪೀಠ ದೇವಾಲಯಕ್ಕೆ ಭೇಟಿ ನೀಡಿರುವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿಗೆ ಕಾಂಗ್ರೆಸ್ ಪ್ರಬಲ ಪೈಪೋಟಿಯೊಡ್ಡುತಿರುವುದರ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಶಿವರಾಜ್ ಸಿಂಗ್ ಚೌಹಾಣ್ ಉತ್ತರಿಸಿದ್ದು, ಸಮಾಜದ ಎಲ್ಲ ವರ್ಗದವರಿಂದ ನಮಗೆ ಚುನಾವಣೆಯಲ್ಲಿ ಆಶೀರ್ವಾದ ದೊರೆತಿದೆ. ನಾವು ಗೆಲುವಿನ ಸನಿಹದಲ್ಲಿದ್ದೇವೆ ಎಂದು ಹೇಳಿದ್ದಾರೆ.