ನವದೆಹಲಿ: 26/11 ಮುಂಬೈ ಉಗ್ರರ ದಾಳಿಯಲ್ಲಿ ಪಾಕಿಸ್ತಾನ ಮೂಲದ ಉಗ್ರರ ಕೈವಾಡವಿರುವ ಕುರಿತು ಇಡೀ ಅಂತರಾಷ್ಟ್ರೀಯ ಸಮುದಾಯಕ್ಕೇ ಗೊತ್ತಿದ್ದು, ಇದನ್ನು ಒಪ್ಪಿಕೊಳ್ಳುವುದು, ಸಮರ್ಥನೆ ನೀಡುವುದು ಭಾರತಕ್ಕೆ ಬೇಕಿಲ್ಲ ಎಂದು ಭಾರತೀಯ ಸೇನೆ ಶನಿವಾರ ಹೇಳಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು, ಮುಂಬೈ ಮೇಲಿನ ದಾಳಿ ಭಯೋತ್ಪದಾಕ ದಾಳಿಯಾಗಿದ್ದು, ಭಯೋತ್ಪಾದನೆ ನಿರ್ಮೂಲನೆಗೊಳಿಸುವುದು ಪಾಕಿಸ್ತಾನದ ಹಿತಾಸಕ್ತಿಗೆ ಬಿಟ್ಟಿದ್ದು. ಮುಂಬೈ ಮೇಲೆ ಯಾರು ದಾಳಿ ಮಾಡಿದ್ದರು ಎಂಬುದು ಇಡೀ ವಿಶ್ವ ಸಮುದಾಯಕ್ಕೆ ತಿಳಿದಿದೆ. ಇದರ ಹೊರತಾಗಿಯೂ ನಮಗೂ ಗೊತ್ತಿದೆ ದಾಳಿ ಯಾರು ನಡೆಸಿದ್ದರು ಎಂಬುದು. ಆದರೂ, ದಾಳಿ ನಡೆಸಿರುವುದರ ಕುರಿತು ಪಾಕಿಸ್ತಾನ ಒಪ್ಪಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದ್ದಾರೆ.
ದಾಳಿ ನಡೆಸಿದ್ದು ಯಾರೆಂಬುದು ನಮಗೆ ಗೊತ್ತಿದೆ. ದಾಳಿ ಕುರಿತಂತೆ ಯಾರಿಂದಲೂ ಹೇಳಿಕೆಗಳನ್ನು ಪಡೆಯುವ ಅಗತ್ಯವಿಲ್ಲ ಎಂದು ನನಗನ್ನಿಸುತ್ತದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಮಾಜಿ ಸೇನಾಧಿಕಾರಿ ಹೂಡಾ ಅವರ ಸರ್ಜಿಕಲ್ ಸ್ಟ್ರೈಕ್ ಕುರಿತು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಹೂಡಾ ಅವರ ಹೇಳಿಕೆಯನ್ನು ನಾನು ಗೌರವಿಸುತ್ತೇನೆ. ಅವರ ಹೇಳಿಕೆ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದಿದ್ದಾರೆ.