ನವದೆಹಲಿ: ರಾಜಸ್ಥಾನದ ರಾಜವಂಶಸ್ಥೆ ಹಾಗೂ ಬಿಜೆಪಿ ಶಾಸಕಿ ದಿಯಾ ಕುಮಾರಿ ತಮ್ಮ 21 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದು. ತಮ್ಮ ಪತಿ ನರೇಂದ್ರ ಸಿಂಗ್ ಅವರಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಹಿಂದೂ ವಿವಾಹ ಕಾಯಿದೆಯ ಪರಿಚ್ಛೇದ 13ಬಿ ಅಡಿ ದಿಲ್ಲಿಯ ಗಾಂಧಿನಗರ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಕೆಲವು ತಿಂಗಳಿನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಪರಸ್ಪರ ಒಪ್ಪಿಗೆಯ ಮೇರೆಗೆ ವಿವಾಹ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ವಿಚ್ಛೇಧನಕ್ಕೆ ಕಾರಣ ತೀರಾ ವಯಕ್ತಿಕವಾದದ್ದು ಎಂದು ಎಂಬರು ತಿಳಿಸಿದ್ದಾರೆ.
ಸಾಧಾರಣ ಕುಟುಂಬಕ್ಕೆ ಸೇರಿದ ನರೇಂದ್ರ ಸಿಂಗ್, 9 ವರ್ಷಗಳ ಪ್ರೀತಿಯ ನಂತರ 1997ರ ಆಗಸ್ಟ್‌ನಲ್ಲಿ ದಿಯಾ ಅವರನ್ನು ಮದುವೆಯಾಗಿದ್ದರು. ಒಂದೇ ಗೋತ್ರದ ಈ ಇಬ್ಬರು ಮದುವೆಯಾಗಿದ್ದು, ರಾಜವಂಶಸ್ಥರು ಮತ್ತು ರಜಪುತ ಸಮುದಾಯದ ಕೆಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ದಂಪತಿಗೆ ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದಾರೆ. ಒಬ್ಬ ಪುತ್ರನನ್ನು ದತ್ತು ತೆಗೆದುಕೊಳ್ಳಲಾಗಿದೆ.
2013ರಲ್ಲಿ ರಾಜಕೀಯ ಪ್ರವೇಶಿಸಿದ ದಿಯಾ ಅವರು, ಸವಾಯಿ ಮಾಧೋಪುರ ಕ್ಷೇತ್ರದ ಶಾಸಕಿಯಾಗಿದ್ದಾರೆ. ಆದರೆ ವೈಯಕ್ತಿಕ ಕಾರಣಗಳಿಗಾಗಿ ಕಳೆದ ವಾರ ನಡೆದ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದೇ ದೂರ ಉಳಿದಿದ್ದರು.