ದೇಶ

ಅಧಿವೇಶನಕ್ಕೆ ಮುನ್ನ ಮೋದಿ ಸರ್ಕಾರಕ್ಕೆ ಆಘಾತ: ಸಚಿವ ಸ್ಥಾನಕ್ಕೆ ಉಪೇಂದ್ರ ಕುಶ್ವಾಹ ರಾಜೀನಾಮೆ

Raghavendra Adiga
ನವದೆಹಲಿ: ರಾಷ್ಟ್ರೀಯ ಲೋಕಶಕ್ತಿ ಪಕ್ಷದ ಮುಖ್ಯಸ್ಥ ಹಾಗೂ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಕೇಂದ್ರ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭಕ್ಕೆ ಒಂದು ದಿನವಷ್ಟೇ ಬಾಕಿ ಇದ್ದಂತೆ ಸಚಿವರು ರಾಜೀನಾಮೆ ಸಲ್ಲಿಸಿರುವುದು ಎನ್ ಡಿಎ ಸರ್ಕಾರಕ್ಕೆ ದೊಡ್ಡ ಆಘಾತವಾಗಿದೆ.
ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ರಾಜ್ಯ ಸಚಿವರಾಗಿದ್ದ ಕುಶ್ವಾಹ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಹಾರದಲ್ಲಿ ಸೀಟು ಹಂಚಿಕೆ ಸಂಬಂಧ ಅಸಮಾಧಾನಗೊಂಡಿದ್ದರು. ಇದೀಗ ಎನ್ ಡಿಎ ಮೈತ್ರಿಕೂಟ ತೊರೆಯುವ ನಿರ್ಧಾರಕ್ಕೆ ಬಂದಿರುವ ಕುಶ್ವಾಹ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಬಿಹಾರದಲ್ಲಿ ಒಟ್ಟಾರೆ 40 ಲೋಕಸಭೆ ಸ್ಥಾನಗಳಿದ್ದು ಈ ಪೈಕಿ ಬಿಜೆಪಿ ಮತ್ತು ಜೆಡಿ (ಯು) ಎರಡು ಪಕ್ಷಗಳು ತಲಾ 17 ಕ್ಷೇತ್ರಗಳಿಂದ ಸ್ಪರ್ಧೆ ಮಾಡುವುದಾಗಿ ಒಪ್ಪಂದವಾಗಿದೆ. ಇದು ಕುಶ್ವಾಹ ಅವರಿಗೆ ಅಸಮಾಧಾನ ತಂದಿದೆ ಎನ್ನಲಾಗಿದೆ.
ಇನ್ನು ತಾತ್ಕಾಲಿಕವಾಗಿ ಮಾಡಿಕೊಳ್ಳಲಾಗಿರುವ ಒಪ್ಪಂದದಂತೆ  ಆರ್​ಎಲ್​ಎಸ್​ಪಿಗೆ ಎರಡು ಸ್ಥಾನಗಳನ್ನು ಮಾತ್ರ ನೀಡಲಾಗಿದ್ದು ಇದು ಆ ಪಕ್ಷ ಕಳೆದ ಸಾಲಿನಲ್ಲಿ ಗೆದ್ದಿರುವ ಸ್ಥಾನಕ್ಕಿಂತಲೂ ಒಂದು ಸ್ಥಾನ ಕಡಿಮೆ ಇದೆ. ಕುಶ್ವಾಹ ಅವರು ಕಾರಕತ್​ ಕ್ಷೇತ್ರದಿಂದ ಗೆದ್ದು ಸಂಸದರಾಗಿದ್ದರು.
SCROLL FOR NEXT