ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ಮತ್ತು ಪ್ರಧಾನಿ ಮೋದಿ ವರ್ಸಸ್ ಕಾಂಗ್ರೆಸ್ ನೇತೃತ್ವದ ಮಹಾ ಘಟ್ ಬಂಧನ್ ನಡುವಿನ ಸಮರವೆಂದೇ ಬಣ್ಣಿಸಲಾಗುತ್ತಿರುವ ಪಂಚ ರಾಜ್ಯಗಳ ಚುನಾವಣೆಯ ಮತಎಣಿಕೆ ಕಾರ್ಯ ಆರಂಭವಾಗಿದೆ.
ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳಲ್ಲಿ ಏಕಕಾಲಕ್ಕೆ ಮತ ಎಣಿಕೆ ಕಾರ್ಯ ಆರಂಭಗೊಂಡಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಈ ಚುನಾವಣೆ ಅತ್ಯಂತ ಪ್ರಮುಖವಾಗಿದ್ದು, ಅಧಿಕಾರ ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿ ಬಿಜೆಪಿ ಇದ್ದರೆ, ಅಧಿಕಾರ ಪಡೆದು ಚೇತರಿಸಿಕೊಳ್ಳುವ ಮೂಲಕ ವ್ಯಾಪಕವಾಗಿ ಬೆಳೆದಿರುವ ಬಿಜೆಪಿ ವಿರುದ್ಧ ಹೋರಾಡುವ ತವಕದಲ್ಲಿದೆ ಕಾಂಗ್ರೆಸ್.
ಸದ್ಯ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ, ಮಿಜೋರಾಂನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ತೆಲಂಗಾಣದಲ್ಲಿ ಟಿಆರ್ಎಸ್ ಅಧಿಕಾರದಲ್ಲಿದ್ದು, ಕಳೆದ ವಾರ ಪ್ರಕಟವಾಗಿದ್ದ ಚುನಾವಣೋತ್ತರ ಸಮೀಕ್ಷೆಯಲ್ಲಿ ತೆಲಂಗಾಣದಲ್ಲಿ ಮತ್ತೆ ಟಿಆರ್ ಎಸ್ ಬಹುಮತ ಪಡೆಯುವ ಸಾಧ್ಯತೆ ಕುರಿತು ವರದಿಯಾಗಿತ್ತು.
ಕಳೆದ ವಾರ ಪ್ರಕಟವಾದ ಮತಗಟ್ಟೆ ಸಮೀಕ್ಷೆಗಳ ಅನ್ವಯ ಕಾಂಗ್ರೆಸ್ ಎಲ್ಲಾ ರಾಜ್ಯಗಳಲ್ಲೂ ಪ್ರಬಲ ಪೈಪೋಟಿ ನೀಡುತ್ತಿದೆ. ರಾಜಸ್ಥಾನದಲ್ಲಿ ಅಧಿಕಾರ ರಚಿಸುವ ಮುನ್ಸೂಚನೆಗಳು ಸಿಕ್ಕಿವೆ. ಮಧ್ಯಪ್ರದೇಶದಲ್ಲಿ ತುರುಸಿನ ಪೈಪೋಟಿ ಏರ್ಪಟ್ಟಿದ್ದು, ಏನಾಗಲಿದೆ ಎಂಬುದನ್ನು ಇನ್ನಷ್ಟೇ ನಿರೀಕ್ಷಿಸಬೇಕು. ಛತ್ತೀಸ್ ಗಢದಲ್ಲಿ ಪೈಪೋಟಿ ನಡುವೆಯೂ ಬಿಜೆಪಿ ಗೆದ್ದು ಬರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಎರಡು ದೊಡ್ಡ ರಾಜ್ಯಗಳನ್ನು ಗೆದ್ದುಕೊಳ್ಳುವ ಉಮೇದಿನಲ್ಲಿರುವ ಕಾಂಗ್ರೆಸ್, ಈಶಾನ್ಯ ರಾಜ್ಯಗಳ ತನ್ನ ಕಡೇ ಕ್ಯಾಂಪ್ ಮಿಜೋರಾಂ ಅನ್ನೇ ಕಳೆದುಕೊಳ್ಳುವ ಸಾಧ್ಯತೆಗಳಿವೆ.