ಐಜ್ವಾಲ್ : ಮಿಜೋರಾಂ ವಿಧಾನಸಭಾ ಚುನಾವಣೆಯಲ್ಲಿ ಮಿಜೋ ರಾಷ್ಟ್ರೀಯ ಫ್ರಂಟ್ -ಎಂಎನ್ ಎಫ್ 26 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹೀನಾಯ ಸೋಲಿಗೆ ಶರಣಾಗಿದೆ.
ನಿರ್ಗಮಿತ ಮುಖ್ಯಮಂತ್ರಿ ಲಾಲ್ ಥಾನಾವಾಲ ಸ್ಪರ್ಧಿಸಿದ್ದ ಎರಡು ಕ್ಷೇತ್ರಗಳಲ್ಲಿ ಸೋತಿದ್ದಾರೆ. ಐದು ಬಾರಿ ಮುಖ್ಯಮಂತ್ರಿಯಾಗಿದ್ದ ಲಾಲ್ ಥಾನಾವಾಲ ದಕ್ಷಿಣ ಚಂಪೈ ಹಾಗೂ ಸೇರ್ಫಿಪ್ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದರು. ಆದರೆ, ಎರಡು ಕಡೆಗಳಲ್ಲಿಯೂ ಸೋತಿದ್ದು, ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ.
ರಾಜ್ಯಪಾಲರಿಗೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಲಾಲ್ ಥಾನಾವಾಲ, ಚುನಾವಣಾ ಫಲಿತಾಂಶದಿಂದ ತೀವ್ರ ನಿರಾಶೆಯಾಗಿದೆ. ಇದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ.
ಈ ಮಧ್ಯೆ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಎಂಎನ್ ಎಫ್ ಅಧ್ಯಕ್ಷ ಜೊರಾಮ್ ತಂಗಾ ನೇತೃತ್ವದ ನಿಯೋಗ ರಾಜ್ಯಪಾಲ ಕುಮ್ಮಾನಾಮ್ ರಾಜಶೇಖರನ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆ ಸಂಬಂಧ ಮಾತುಕತೆ ನಡೆಸಿದೆ.