ನವದೆಹಲಿ: ಸುನಂದಾ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇರೆಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ವಿರುದ್ಧ ಹಿರಿಯ ಕಾಂಗ್ರೆಸ್ ಮುಖಂಡ ಶಶಿ ತರೂರ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ತಮ್ಮನ್ನು ಹತ್ಯೆ ಆರೋಪಿ ಎಂದು ಕರೆದಿದ್ದರಿಂದ ಬೇಷರತ್ತಾದ ಕ್ಷಮೆ ಕೋರಬೇಕೆಂದು ರವಿಶಂಕರ್ ಪ್ರಸಾದ್ ಅವರಿಗೆ ಶಶಿ ತರೂರ್ ಕಾನೂನು ನೋಟಿಸ್ ಕಳುಹಿಸಿದ್ದರು. ಈಗ ತಿರುವನಂತಪುರಂನ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
ಸುನಂದಾ ಪುಷ್ಕರ್ ಹತ್ಯೆಯಿಂದ ಸಾವನ್ನಪ್ಪಿಲ್ಲ ಎಂಬುದು ಅಂತಿಮ ವರದಿಯಿಂದ ತಿಳಿದುಬಂದಿದೆ.ಈ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿ ಜಾಮೀನು ಪಡೆದುಕೊಂಡಿರುವುದಾಗಿ ಶಶಿ ತರೂರ್ ದೂರಿನಲ್ಲಿ ಹೇಳಿದ್ದಾರೆ.
ಕೇಂದ್ರಸರ್ಕಾರದ ಒತ್ತಡದಿಂದಾಗಿ ದೆಹಲಿ ಪೊಲೀಸರು ತಮ್ಮ ಮೇಲೆ ಜಾರ್ಜ್ ಶೀಟ್ ದಾಖಲಿಸಿದ್ದರು ಎಂದು ಆರೋಪಿಸಿರುವ ಶಶಿ ತರೂರ್ , ಸುಳ್ಳು ಕೇಸಿನಲ್ಲಿ ತಮ್ಮನ್ನು ಸಿಲುಕಿಸಲು ಪಿತೂರಿ ನಡೆಸಲಾಗಿತ್ತು ಎಂದು ಹೇಳಿದ್ದಾರೆ.
ಅಕ್ಚೋಬರ್ 28 ರಂದು ರವಿಶಂಕರ್ ಪ್ರಸಾದ್ ಟ್ವೀಟರ್ ನಲ್ಲಿ ಹಾಕಿರುವ 2 ನಿಮಿಷ 18 ಸೆಕೆಂಡ್ ಗಳ ವಿಡಿಯೋ ಕ್ಲಿಪ್ ನಲ್ಲಿ ತಪ್ಪಾದ, ಮಾನನಷ್ಟ ಹೇಳಿಕೆಗಳನ್ನು ನೀಡಿದ್ದಾರೆ . ಇಂತಹ ಹೇಳಿಕೆಯಿಂದ ಸಾರ್ವಜನಿಕವಾಗಿ ತಮ್ಮ ಮಾನನಷ್ಟವಾಗಿರುವುದಾಗಿ ದೂರಿನಲ್ಲಿ ಶಶಿ ತರೂರ್ ಆಪಾದಿಸಿದ್ದಾರೆ.