ದೇಶ

ತೆಲಂಗಾಣದಲ್ಲಿ ಮತಯಂತ್ರಗಳನ್ನು ಹ್ಯಾಕ್ ಮಾಡಿರುವ ಸಾಧ್ಯತೆ ಇದೆ: ಉತ್ತಮ್ ಕುಮಾರ್ ರೆಡ್ಡಿ

Srinivasamurthy VN
ಹೈದರಾಬಾದ್: ತೆಲಂಗಾಣದಲ್ಲಿ ಮತಯಂತ್ರಗಳನ್ನು ಹ್ಯಾಕ್ ಮಾಡಿರುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಉತ್ತಮ್ ಕುಮಾರ್ ರೆಡ್ಡಿ ಹೇಳಿದ್ದಾರೆ.
ಹಾಲಿ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಕೆ ಚಂದ್ರಶೇಖರರಾವ್ ಅವರ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿ ಅಭೂತಪೂರ್ವ ಜಯಭೇರಿ ಭಾರಿಸಿದ್ದು, ಪ್ರತಿಪಕ್ಷ ಕಾಂಗ್ರೆಸ್ 2ನೇ ಸ್ಥಾನಕ್ಕೆ ಸಮಾಧಾನ ಪಟ್ಟುಕೊಂಡಿದೆ. ವಿಧಾನಸಭೆಯ ಒಟ್ಟು 119 ಕ್ಷೇತ್ರಗಳ ಪೈಕಿ ಟಿಆರ್ಸ್ 91 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಸರ್ಕಾರ ರಚನೆಗೆ ಸಿದ್ಧವಾಗಿ ನಿಂತಿದೆ. ಅಂತೆಯೇ ಮುಂದಿನ ಬಾರಿಗೂ ಕೆಸಿಆರ್ ಮುಖ್ಯಮಂತ್ರಿಯಾಗುವುದು ನಿಚ್ಚಳವಾಗಿದ್ದು, ಕಳೆದ ಬಾರಿಗಿಂತಲೂ ಈ ಬಾರಿ ಟಿಆರ್ ಎಸ್ ಭರ್ಜರಿ ಗೆಲುವು ದಾಖಲಿಸಿದೆ.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ತೆಲಂಗಾಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ, 'ತೆಲಂಗಾಣದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಫಲಿತಾಂಶ ಬಂದಿಲ್ಲ. ಇವಿಎಂ ಮಷಿನ್ ಗಳನ್ನ ದುರ್ಬಳಕೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಫಲಿತಾಂಶದ ಬಗ್ಗೆ ನನಗೆ ಅನುಮಾನ ಇದೆ. ಬ್ಯಾಲೆಟ್​​ ಪೇಪರ್ ನಲ್ಲಿ ಕಾಂಗ್ರೆಸ್​ ಮುನ್ನಡೆ ಸಾಧಿಸಿತ್ತು. ಆದರೆ ಇವಿಎಂ ಮಷಿನ್​ ಹ್ಯಾಕ್ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. 
ಅಂತೆಯೇ ಫಲಿತಾಂಶಕ್ಕೂ ಮೊದಲೇ ಟಿಆರ್ ಎಸ್ ಕಾರ್ಯಕರ್ತರು ಮತ್ತು ನಾಯಕರು ವಿರೋಧ ಪಕ್ಷದ ಅಭ್ಯರ್ಥಿಗಳು ಸೋಲುತ್ತಾರೆ ಎಂದು ಹೇಳಿದ್ಜರು. ಯಾರು ಯಾರು ಸೋಲುತ್ತಾರೆ ಎಂದು ಅವರಿಗೆ ಹೇಗೆ ಗೊತ್ತು. ಈ ಬಗ್ಗೆ ತಮಗೆ ಅನುಮಾನವಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮತ್ತು ಚುನಾವಣಾ ಅಧಿಕಾರಿಗಳಿಗೆ ಕಾಂಗ್ರೆಸ್ ಪಕ್ಷ ದೂರು ನೀಡಲಿದ್ದೇವೆ ಎಂದು ಹೇಳಿದ್ದಾರೆ.
SCROLL FOR NEXT