ದೇಶ

ಜಯಾ ಸಾವಿನ ತನಿಖೆ: ತಮಿಳುನಾಡು ಡಿಸಿಎಂ, ಆರೋಗ್ಯ ಸಚಿವರಿಗೆ ಸಮನ್ಸ್

Lingaraj Badiger
ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ನಿಧನದ ಕುರಿತು ತನಿಖೆ ನಡೆಸುತ್ತಿರುವ ನಿವೃತ್ತ ನ್ಯಾಯಮೂರ್ತಿ ಎ ಅರ್ಮುಗಸ್ವಾಮಿ ಆಯೋಗ ಗುರುವಾರ ತಮಿಳುನಾಡು ಉಪ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಹಾಗೂ ಆರೋಗ್ಯ ಸಚಿವ ಸಿ ವಿಜಯಭಾಸ್ಕರ್ ಅವರಿಗೆ ಸಮನ್ಸ್ ಜಾರಿ ಮಾಡಿದೆ.
ಪನ್ನೀರ್ ಸೆಲ್ವಂ ಅವರಿಗೆ ಡಿಸೆಂಬರ್ 20ರೊಳಗೆ ಹಾಗೂ ವಿಜಯಭಾಸ್ಕರ್ ಅವರಿಗೆ ಡಿಸೆಂಬರ್ 18ರೊಳಗೆ ವಿಚಾರಣೆಗೆ ಹಾಜರಾಗುವಂತೆ ತನಿಖಾ ಆಯೋಗ ಸೂಚಿಸಿದೆ.
ಈ ಮುಂಚೆ ತಮಿಳುನಾಡು ಆರೋಗ್ಯ ಇಲಾಖೆ ಕಾರ್ಯದರ್ಶಿ ಜೆ ರಾಧಾಕೃಷ್ಣನ್ ಅವರಿಗೆ ಡಿಸೆಂಬರ್ 14ರಂದು ವಿಚಾರಣೆಗೆ ಹಾಜರಾಗುವಂತೆ ತನಿಖಾ ಆಯೋಗ ಸಮನ್ಸ್ ನೀಡಿತ್ತು.
ಜಯಲಲಿತಾ ಅವರು 2016, ಸೆಪ್ಟೆಂಬರ್ 22ರಂದು ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. 72 ದಿನಗಳ ಸುದೀರ್ಘ ಚಿಕಿತ್ಸೆಯ ನಂತರ ಡಿಸೆಂಬರ್ 5, 2016ರಂದು ನಿಧನರಾಗಿದ್ದರು.
ನಿಗೂಢ ಸಾವಿನ ತನಿಖೆ ನಡೆಸುತ್ತಿರುವ ಸಮಿತಿ ಇದೇ ಮೊದಲ ಬಾರಿಗೆ ಶಶಿಕಲಾ ಹೇಳಿಕೆ ದಾಖಲಿಸಿಕೊಳ್ಳಲು ಮುಂದಾಗಿದೆ. ಈಗಾಗಲೇ ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿದಂತೆ ಜಯಲಲಿತಾ ದಾಖಲಾಗಿದ್ದ ಆಪೊಲೋ ಆಸ್ಪತ್ರೆಯ ಸಿಬ್ಬಂದಿ ಹಾಗೂ ಜಯಲಲಿತಾ ಆರೈಕೆ ಮಾಡಿದ ಸಿಬ್ಬಂದಿ ಸೇರಿದಂತೆ ನೂರಕ್ಕೂ ಹೆಚ್ಚು ಜನರ ವಿಚಾರಣೆಯನ್ನು ಮಾಡಿದೆ.
SCROLL FOR NEXT