ದೇಶ

ವಿವಿಐಪಿ ಕ್ಯಾಪ್ಟರ್ ಹಗರಣ: ಐಎಎಫ್ ಅಧಿಕಾರಿಗಳ ವಿದೇಶ ಪ್ರವಾಸದ ಖರ್ಚು ಭರಿಸಿದ್ದು ಮೈಕೆಲ್ - ಸಿಬಿಐ

Lingaraj Badiger
ನವದೆಹಲಿ: ದುಬೈ ನಿಂದ ಗಡಿಪಾರಾಗಿ ಭಾರತಕ್ಕೆ ಬಂದಿರುವ ಬಹುಕೋಟಿ ವಿವಿಐಪಿ ಕ್ಯಾಪ್ಟರ್ ಹಗರಣದ ಪ್ರಮುಖ ಆರೋಪಿ, ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಅವರನ್ನು ದೆಹಲಿ ಕೋರ್ಟ್ ಶನಿವಾರ ಮತ್ತೆ ನಾಲ್ಕು ದಿನ ಸಿಬಿಐ ವಶಕ್ಕೆ ನೀಡಿ ಆದೇಶಿಸಿದೆ.
ಕಳೆದ ವಾರ ಕ್ರಿಶ್ಚಿಯನ್ ಮೈಕೆಲ್ ಅವರನ್ನು ವಿಚಾರಣೆಗಾಗಿ ದೆಹಲಿ ಪಟಿಯಾಲ ಕೋರ್ಟ್ ಐದು ದಿನ ಸಿಬಿಐ ವಶಕ್ಕೆ ನೀಡಿತ್ತು. ಇಂದು ಮತ್ತೆ ಸಿಬಿಐ ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್ ಅವರ ಮುಂದೆ ಹಾಜರುಪಡಿಸಿದ ಸಿಬಿಐ ಹೆಚ್ಚಿನ ವಿಚಾರಣೆಗಾಗಿ ಮತ್ತೆ ನಾಲ್ಕು ದಿನ ತನ್ನ ವಶಕ್ಕೆ ಪಡೆದಿದೆ.
ಈ ವೇಳೆ, ಭಾರತೀಯ ವಾಯುಪಡೆ(ಐಎಎಫ್)ಯ ಹಾಲಿ ಹಾಗೂ ನಿವೃತ್ತ ಅಧಿಕಾರಿಗಳ ವಿದೇಶ ಪ್ರವಾಸದ ಖರ್ಚನ್ನು ಮೈಕೆಲ್ ಅವರು ಭರಿಸಿದ್ದಾರೆ ಎಂದು ಸಿಬಿಐ ಕೋರ್ಟ್ ಗೆ ತಿಳಿಸಿದೆ.
ಇನ್ನು ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ಐದು ವರ್ಷಗಳಿಂದಲೂ ಮೈಕೆಲ್ ಪರವಾಗಿ ಇಟಲಿ ಮತ್ತು ಸ್ವಿಟ್ಜರ್​ಲೆಂಡ್​ನಲ್ಲಿ ವಕಾಲತ್ತು ವಹಿಸುತ್ತಿದ್ದ ವಕೀಲೆ ರೋಸ್​ ಮೇರಿ ಪ್ಯಾಟ್ರಿದಿ ಅವರು ಪಟಿಯಾಲ ಕೋರ್ಟ್​ಗೂ ಹಾಜರಾಗಿದ್ದರು. ಅವರಿಗೆ ಮಾತನಾಡಲು ಕೋರ್ಟ್​ 10 ನಿಮಿಷಗಳ ಸಮಯ ನೀಡಿತು. ಆದರೆ, ಸಿಬಿಐ ವಶದಲ್ಲಿರುವ ಮೈಕೆಲ್​ ಅವರನ್ನು ಭೇಟಿ ಮಾಡಬೇಕು ಎಂಬ ರೋಸ್​ಮೇರಿ ಅವರ ಮನವಿಯನ್ನು ಕೋರ್ಟ್​ ನಿರಾಕರಿಸಿತು.
12 ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್​ಪಿ ತ್ಯಾಗಿ ಸೇರಿದಂತೆ 9 ಆರೋಪಿಗಳ ವಿರುದ್ಧ ಚಾರ್ಜ್​ ಶೀಟ್ ಸಲ್ಲಿಸಿದ್ದು, ಈ ಒಪ್ಪಂದದಿಂದ ಸರ್ಕಾರದ ಖಜಾನೆಗೆ 2,666 ಕೋಟಿ ರೂ ನಷ್ಟವಾಗಿದೆ ಎಂದು ಆರೋಪಿಸಿದೆ.
ಈ ಒಪ್ಪಂದವು ಸಾಕಾರಗೊಳ್ಳಲು ನೆರವಾಗುವ ಕಾರ್ಯಕ್ಕೆ ಅಗಸ್ಟವೆಸ್ಟ್​ಲ್ಯಾಂಡ್ ಸಂಸ್ಥೆಯಿಂದ ಕ್ರಿಶ್ಚಿಯನ್ ಮೈಕೆಲ್​ ಸುಮಾರು 225 ಕೋಟಿ ರು. ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ.
SCROLL FOR NEXT