ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ ಉಂಟಾಗಿರುವುದರಿಂದ ಪೆಥೈ ಚಂಡಮಾರುತ ಸೃಷ್ಟಿಯಾಗಿದ್ದು, ಉಭಯ ರಾಜ್ಯಗಳ ಕರಾವಳಿಗೆ ಚಂಡಮಾರುತ ಅಪ್ಪಳಿಸುವ ಕುರಿತು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಪೆಥೈ ಚಂಡಮಾರುತದ ಪರಿಣಾಮ ಆಂಧ್ರಪ್ರದೇಶದ ಕರಾವಳಿ ಮತ್ತು ತಮಿಳುನಾಡಿನ ಉತ್ತರ ಭಾಗದಲ್ಲಿ ಭಾನುವಾರ, ಸೋಮವಾರ ಬಿರುಗಾಳಿ ಸಹಿತ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಭಾನುವಾರ ಮತ್ತು ಸೋಮವಾರ ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸಾಧ್ಯತೆಯಿದೆ. ಉತ್ತರ ತಮಿಳುನಾಡಿನಲ್ಲಿ ಭಾನುವಾರ ಭಾರಿ ಮಳೆಯಾಗಲಿದೆ. ಆಂಧ್ರಪ್ರದೇಶ, ಉತ್ತರ ತಮಿಳುನಾಡು ಮತ್ತು ಪುದುಚೆರಿ ಕರಾವಳಿ ಪ್ರದೇಶಗಳಲ್ಲಿ ಗಂಟೆಗೆ 45-65 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ. ಈ ವೇಗ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ತಮಿಳುನಾಡಿನ ರಾಜಧಾನಿ ಚೆನ್ನೈ, ಪುದುಚೇರಿ. ಆಂಧ್ರ ಪ್ರದೇಶದ ಮಚಲೀ ಪಟ್ಟಣಂ, ಕಾಕಿನಾಡ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಉಪ ನಿರ್ದೇಶಕ ಎಸ್ ಬಾಲಚಂದ್ರನ್ ಅವರು ಹೇಳಿದ್ದಾರೆ.