ಕಾಮಗಾರಿ ವೀಕ್ಷಿಸಿದ ಗೋವಾ ಸಿಎಂ ಪರಿಕ್ಕರ್
ಪಣಜಿ: ಅನಾರೋಗ್ಯದಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ಭಾನುವಾರ ದಿಢೀರ್ ಪ್ರತ್ಯಕ್ಷರಾಗುವ ಮೂಲಕ ಅಚ್ಚರಿ ಮೂಡಿಸಿದರು.
ದೆಹಲಿಯ ಎಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪರಿಕ್ಕರ್ ಅವರು ನಿನ್ನೆ ಡಿಸ್ಚಾರ್ಜ್ ಆಗಿದ್ದರು. ವೈದ್ಯರೂ ಕೂಡ ಮನೆಯಲ್ಲೇ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದರು. ಆದರೆ ಪರಿಕ್ಕರ್ ಅವರು ಮಾತ್ರ ಗೋವಾಗೆ ವಾಪಸ್ ಆಗುತ್ತಿದ್ದಂತೆಯೇ ಎರಡು ಮೈಲ್ಸೇತುವೆಗಳ ಕಾಮಗಾರಿ ಪರಿಶೀಲನೆ ನಡೆಸಿದ್ದಾರೆ.
ಮಂಡೋವಿ ನದಿಯ ನಿರ್ಮಾಣ ಹಂತದ ಸೇತುವೆಯನ್ನು ಪರಿಕ್ಕರ್ ಪರಿಶೀಲಿಸಿದ್ದು, ಕಾಮಗಾರಿ ಬಳಿ ಕಾರಿನಲ್ಲಿ ಬಂದ ಗೋವಾ ಸಿಎಂ ಗೋವಾ ಇನ್ ಫ್ರಾಸ್ಟ್ರಕ್ಚರ್ ಡೆವಲಪ್ ಮೆಂಟ್ ಕಾರ್ಪೊರೇಷನ್ ಅಧಿಕಾರಿಗಳ ಬಳಿ ಕೆಲಸದ ಪ್ರಗತಿ ಹಾಗೂ ಒಪ್ಪಂದದ ಕುರಿತು ಚರ್ಚೆ ನಡೆಸಿದರು. ಅಂತೆಯೇ ಜುವಾರಿ ನದಿಗೆ ಅಗಸ್ಸೈಮ್ ಗ್ರಾಮದಲ್ಲಿ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯ ಕಾಮಗಾರಿಯನ್ನೂ ಕೂಡ ಪರಿಕ್ಕರ್ ವೀಕ್ಷಣೆ ಮಾಡಿದರು. ಈ ಎರಡೂ ಸೇತುವೆಗಳ ಕಾಮಗಾರಿ ಮುಂದಿನ ವರ್ಷ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ
ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಸಿಎಂ ಪರಿಕ್ಕರ್ ಅವರು ವಿದೇಶದಲ್ಲಿ ಚಿಕಿತ್ಸೆ ಪಡೆದುಕೊಂಡು ಭಾರತಕ್ಕೆ ಆಗಮಿಸಿದ್ದು, ಕಳೆದ 9 ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಹಲವು ದಿನಗಳಿಂದ ಬಹಿರಂಗವಾಗಿ ಎಲ್ಲೂ ಕಾಣಿಸಿಕೊಳ್ಳದೆ ಮನೆಯಲ್ಲೇ ಚೇತರಿಸಿಕೊಳ್ಳುತ್ತಿದ್ದರು. ಆದರೆ ಇದಕ್ಕೆ ವಿರೊಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದು, ರಾಜ್ಯದ ಆಡಳಿತ ಸಂಪೂರ್ಣ ಸ್ಥಗಿತಗೊಂಡಿದೆ. ಇಂತಹ ಪರಿಸ್ಥಿತಿಯಲ್ಲ ಮಧ್ಯ ಪ್ರವೇಶಿಸಬೇಕಾದ ರಾಜ್ಯಪಾಲರು ಯಾವುದೆ ಪರ್ಯಾಯ ಆಲೋಚನೆ ಮಾಡುತ್ತಿಲ್ಲ ಎಂದು ಆರೋಪಿಸುತ್ತಿದೆ.
ಅಷ್ಟೇ ಅಲ್ಲದೇ ವಿರೋಧ ಪಕ್ಷಗಳು ಸಿಎಂ ಪರಿಕ್ಕರ್ ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಬೇಕೆಂದು ರಾಜ್ಯಪಾರಿಗೆ ಮನವಿ ಮಾಡಿದ್ದರು. ಇದೀಗ ಹಲವು ದಿನಗಳ ಬಳಿಕ ಆಸ್ಪತ್ರೆಯಿಂದ ಬಂದು ಸಾರ್ವಜನಿಕವಾಗಿ ಕಾಣಿಸಿಕೊಂಡು ವಿರೋಧ ಪಕ್ಷದವರ ಬಾಯಿ ಮುಚ್ಚಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos