ಹೈದರಾಬಾದ್: ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ ಉಂಟಾಗಿರುವುದರಿಂದ ಪೆಥೈ ಚಂಡಮಾರುತ ಸೃಷ್ಟಿಯಾಗಿದ್ದು, ಆಂಧ್ರ ಪ್ರದೇಶ ಮತ್ತು ತಮಿಳುನಾಡಿಗೆ ಕರಾವಳಿಗೆ ಪೆಥೈ ಚಂಡಮಾರುತ ಅಪ್ಪಳಿಸಿದೆ.
ಪೆಥೈ ಚಂಡಮಾರುತ ಇಂದು ಇಂದು ಮಧ್ಯಾಹ್ನ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಗೆ ಅಪ್ಪಳಿಸಿದ್ದು, ಗಾಳಿ ಹಾಗೂ ಮಳೆಯ ಆರ್ಭಟ ಆರಂಭವಾಗಿದೆ.
ಆಂಧ್ರ ಪ್ರದೇಶದ ಒಟ್ಟು ಒಂಬತ್ತು ಕರಾವಳಿ ಜಿಲ್ಲೆಗಳ ಪೈಕಿ ಏಳು ಜಿಲ್ಲೆಗಳಲ್ಲಿ ಸೋಮವಾರ ಮತ್ತು ಮಂಗಳವಾರ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಆಂಧ್ರದ ಕಾಕಿನಾಡ ಕಡೆ ಗಂಟೆಗೆ 70ರಿಂದ 80 ಕಿ.ಮೀ.ವೇಗದಲ್ಲಿ ಪೆಥೈ ಚಂಡಮಾರುತ ಬೀಸುತ್ತಿದ್ದು, ಭೂ ಕುಸಿತ ಸಂಭವಿಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.
ಆಂಧ್ರ ಪ್ರದೇಶದ ಕರಾವಳಿ ಜಿಲ್ಲೆಗಳಾದ ವಿಶಾಖಪಟ್ಟಣಂ, ಪೂರ್ವ ಗೋವಾವರಿ, ಪಶ್ಚಿಮ ಗೋವಾದವರಿ, ಕೃಷ್ಣ ಮತ್ತು ಗುಂಟೂರು ಜಿಲ್ಲೆಗಳಲ್ಲಿ ತಗ್ಗು ಪ್ರದೇಶಗಳಲ್ಲಿ ಈ ಚಂಡಮಾರುತ ತೀವ್ರ ಹಾನಿ ಉಂಟು ಮಾಡುವ ಸಾಧ್ಯತೆ ಇರುವುದರಿಂದ ಆ ಪ್ರದೇಶದ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಉತ್ತರ ತಮಿಳುನಾಡು ಮತ್ತು ಪುದುಚೆರಿ ಕರಾವಳಿ ಪ್ರದೇಶಗಳಲ್ಲಿ ಗಂಟೆಗೆ 45-65 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ. ಈ ವೇಗ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.