ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ಮುಂಬೈ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರೀಗ ಪಪ್ಪು ಆಗಿ ಉಳಿದಿಲ್ಲ, ಅವರೀಗ ಪಪ್ಪಾ ಆಗಿದ್ದಾರೆಂದು ಕೇಂದ್ರ ಸಚಿವ ಹಾಗೂ ಆರ್'ಪಿಐ ಮುಖ್ಯಸ್ಥ ರಾಮದಾಸ್ ಅಠಾವಳೆ ಹೇಳಿದ್ದಾರೆ.
ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳ ಪೈಕಿ ಕಾಂಗ್ರೆಸ್ ಮೂರು ರಾಜ್ಯಗಳಲ್ಲಿ ಭರ್ಜರಿ ಗೆಲವು ಸಾಧಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಸಾಮಾಜಿಕ ಮಾಧ್ಯಮಗಳಲ್ಲಿ ರಾಹುಲ್ ಅವರನ್ನು ಪಪ್ಪು ಎಂದು ಸಂಭೋದಿಸಲಾಗುತ್ತಿತ್ತು. ಆದರೆ, ಅವರು ಛತ್ತೀಸ್ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ ಬಳಿಕ ಪಪ್ಪು ಆಗಿ ಉಳಿದಿಲ್ಲ. ಕಾಂಗ್ರೆಸ್ಸಿಗೆ ಪಪ್ಪಾ ಆಗಿದ್ದಾರೆಂದು ಹೇಳಿದ್ದಾರೆ.
ಮೂರು ರಾಜ್ಯಗಳ ಸೋಲಿಗೆ ಪ್ರಧಾನಿ ಮೋದಿಯವರು ಕಾರಣವಲ್ಲ. ಬಿಜೆಪಿ ಕಾರಣ ಎಂದು ಇದೇ ವೇಳೆ ಅಠಾವಳೆ ತಿಳಿಸಿದ್ದಾರೆ.
ಎನ್'ಡಿಎ ಜೊತೆ ಮೈತ್ರಿ ಮಾಡಿಕೊಳ್ಳದಿದ್ದರೆ ಅದರಿಂದ ಶಿವಸೇನೆಗೆ ನಷ್ಟವಾಗಲಿದೆ. ಬಿಜೆಪಿಗೆ ಇದರಿಂದ ಯಾವುದೇ ರೀತಿಯ ನಷ್ಟವಾಗುವುದಿಲ್ಲ. ಶಿವಸೇನೆ ಮುಖಂಡ ಉದ್ಧವ್ ಠಾಕ್ರೆಯವರು ಶಿವಸೇನೆಯ ಸಂಸ್ಥಾಪಕ ಬಾಳ ಠಾಕ್ರೆಯವರ ಕನಸನ್ನು ನನಸಾಗಿಸಬೇಕು. ಚುನಾವಣೆಯಲ್ಲಿ ಬಿಜೆಪಿಯನ್ನು ಬಿಟ್ಟು ಒಂಟಿಯಾಗಿ ಸ್ಪರ್ಧಿಸುವ ಬಗ್ಗೆ ಠಾಕ್ರೆ ಚಿಂತಿಸಬಾರದು ಎಂದಿದ್ದಾರೆ.