ಪತ್ರಕರ್ತ ಕಿಶೋರ್ ಚಂದ್ರ ವಾಂಗ್‌ಖೇಮ್ ಅವರ ಪತ್ನಿ ರಂಜಿತಾ
ಇಂಪಾಲ್: ಬಿಜೆಪಿಯ ನೇತೃತ್ವದ ಮಣಿಪುರ ಸರ್ಕಾರ ಪತ್ರಕರ್ತನ ಬಂಧನದ ವಿರುದ್ಧ ಜನರನ್ನು ಹತ್ತಿಕ್ಕಲು ತನ್ನೆಲ್ಲಾ ಶಕ್ತಿಯನ್ನೂ ಬಳಸುತ್ತಿದೆ ಎಂದು ರಾಷ್ಟ್ರೀಯ ಭದ್ತರಾ ಕಾಯ್ದೆಯಡಿಯಲ್ಲಿ ಬಂಧಿಸಲ್ಪಟ್ಟ ಪತ್ರಕರ್ತ ಕಿಶೋರ್ ಚಂದ್ರ ವಾಂಗ್‌ಖೇಮ್ ಅವರ ಪತ್ನಿ ರಂಜಿತಾ ಹೇಳಿದ್ದಾರೆ.
ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿ ನವೆಂಬರ್ 26ರಂದು ಪತ್ರಕರ್ತ ಕಿಶೋರ್ ಚಂದ್ರ ಅವರನ್ನು ಮಣಿಪುರ ಪೋಲೀಸರು ಬಂಧಿಸಿದ್ದರು. ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ವಿರುದ್ಧ ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದಕ್ಕಾಗಿಅವರನ್ನು ಬಂಧಿಸಲಾಗಿತ್ತು.
ಈಶಾನ್ಯ ರಾಜ್ಯದಲ್ಲಿ ಸ್ಥಳೀಯ ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ಕಿಶೋರ್ ಚಂದ್ರ ಬಿಜೆಪಿ ನೇತೃತ್ವದ ರಾಜ್ಯ ಸರಕಾರವನ್ನು ಟೀಕಿಸಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಅಪ್‌ಲೋಡ್ ಮಾಡಿದ್ದಲ್ಲದೆ ಮುಖ್ಯಂತ್ರಿ ಸಿಂಗ್ ಪ್ರಧಾನಿ ಮೋದಿಯವರ ಕೈಗೊಂಬೆಯಾಗಿದ್ದಾರೆ ಎಂದು ಟೀಕಿಸಿದ್ದರು
ಕೆಲ ವೀಡಿಯೋದಲ್ಲಿ ರಾಜ್ಯ ಸರ್ಕಾರ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಅವರ ಜನ್ಮದಿನಾಚರಣೆ ಮಾಡಿರುವುದನ್ನು ಟೀಕಿಸಿದ್ದಲ್ಲದೆ ಮುಖ್ಯಮಂತ್ರಿಗಳ ವಿರುದ್ಧ ಅವಹೇಳನಕಾರಿ ಪದಪ್ರಯೋಗ ನಡೆಸಿದ್ದರು.
"ನಾವು ಹೈಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಿದ್ದೇವೆ ನನ್ನ ಪತಿಯ ನಿಲುವು ಹೇಗೆ ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರಿದೆ?ಅವರು ಎನ್ಎಸ್ಎ ಅನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ.ಈಗ ಏನು ಮಾಡಬೇಕೆಂದು ನಮಗೆ ಗೊತ್ತಿಲ್ಲ, ಜನರನ್ನು ಮೌನವಾಗಿಸಲು ಅವರು ತಮ್ಮ ಶಕ್ತಿಯನ್ನು ಬಳಸುತ್ತಿದ್ದಾರೆ" ಎಂದು ರಣಜಿತಾ ಎ ಎನ್ ಐಗೆ ತಿಳಿಸಿದರು.
"ಇದು ಪ್ರಜಾಪ್ರಭುತ್ವದ ಸರಿಯಾದ ರೀತಿಯಲ್ಲ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನಾವು ಯಾರನ್ನೇ ಆದರೂ ಟೀಕಿಸುವ ಅಧಿಕಾರವಿದೆ. ಮುಖ್ಯ ನ್ಯಾಯಾಧೀಶರು ಸಹ ಕಠಿಣ ಭಾಷೆಯನ್ನು ಬಳಸಬಹುದು, ಹಾಗೆಯೇ ಸರ್ಕಾರವನ್ನು ಟೀಕಿಸುವುದು ತಪ್ಪಲ್ಲ. ಪ್ರಜಾಪ್ರಭುತ್ವದ ದೇಶದಲ್ಲಿ ಟೀಕೆಯನ್ನು ಸಕಾರಾತ್ಮಕವಾಗಿ ಕಾಣಬೇಕು.ನಾವು ಅಭಿವೃದ್ದಿ ಹೊಂದಿದ ದೇಶದಲ್ಲಿದ್ದೇವೆ ಆದ್ದರಿಂದ ಟೀಕೆಗಳಿಲ್ಲದೆ ನಾವು ಹೇಗೆ ಅಭಿವೃದ್ಧಿ ಸಾಧಿಸಬಹುದು?" ರಂಜಿತಾ ಪ್ರಶ್ನಿಸಿದ್ದಾರೆ.
ಡಿಸೆಂಬರ್ 14 ರಂದು, ವಾಂಗ್‌ಖೇಮ್ ಹನ್ನೆರಡು ತಿಂಗಳುಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿತ್ತು..