ದೇಶ

2018 ಹಿನ್ನೋಟ: ಭಾರತದಲ್ಲಿ #MeToo ಘಾಟು!

Vishwanath S
ಭಾರತೀಯ ಚಿತ್ರರಂಗದಲ್ಲಿ ಚಿತ್ರಗಳ ಅಬ್ಬರದ ನಡುವೆ ಮೀಟೂ ಆರೋಪಗಳು ಬಳಹ ಸದ್ದು ಮಾಡಿದ್ದವು. ಹಲವು ನಟಿಯರು ನಟರ ವಿರುದ್ಧ ಮೀಟೂ ಆರೋಪ ಮಾಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸಿನಿಮಾರಂಗದ ನಂತರ ರಾಜಕಾರಣ, ಕ್ರೀಡೆ, ಐಟಿ-ಬಿಟಿ ಕ್ಷೇತ್ರ, ಪತ್ರಿಕೋದ್ಯಮದಲ್ಲಿಯೂ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರು ಮೀಟೂ ಅಭಿಯಾನದಡಿ ಮಾಹಿತಿ ಹೊರಹಾಕಿದ್ದರು.
ತನುಶ್ರೀ ದತ್ತಾರಿಂದ ಮೀಟೂ ಅಭಿಯಾನ ಆರಂಭ
ಬಾಲಿವುಡ್ ನಟಿ ತನುಶ್ರೀ ದತ್ತ ಅವರು ಖ್ಯಾತ ಹಿರಿಯ ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡುವ ಮೂಲಕ ಚರ್ಚೆಗೆ ದಾರಿ ಮಾಡಿಕೊಟ್ಟರು. ತನುಶ್ರೀ ದತ್ತ 12 ವರ್ಷಗಳ ಹಿಂದೆ ನನಗೆ ನಾನಾ ಪಾಟೇಕರ್ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ಆರೋಪಿಸಿದ್ದರು. ಈ ಮೀಟೂ ಆರೋಪ ಮಾಡಿದ ಕೆಲವೇ ದಿನದಲ್ಲಿ ಮೀಟೂ ಎಂಬ ಅಭಿಯಾನ ಇಡೀ ದೇಶವನ್ನು ಪಸರಿಸಿತು. ನಂತರ ಸಂಸ್ಕಾರಿ ನಟ ಎಂದೇ ಪ್ರಖ್ಯಾತರಾಗಿರುವ ಅಲೋಕ್ ನಾಥ್, ಗಾಯಕ ಕೈಲಾಶ್ ಖೇರ್, ಅಭಿಜಿತ್, ನಟ ರಜತ್ ಕಪೂರ್, ನಿರ್ದೇಶಕ ವಿಕಾಸ್ ಬಾಹ್ಲ, ಬರಹಗಾರ ವರುಣ್ ಗ್ರೋವರ್ ವಿರುದ್ಧ ಮೀಟೂ ಆರೋಪಗಳು ಕೇಳಿ ಬಂದಿವೆ.
ಕೇಂದ್ರ ಸಚಿವ ಎಂಜೆ ಅಕ್ಬರ್ ತಲೆದಂಡ
ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಕೇಂದ್ರ ಸಚಿವರಾಗಿದ್ದ ಎಂಜೆ ಅಕ್ಬರ್ ಅವರ ಮೇಲೆ 10ಕ್ಕೂ ಹೆಚ್ಚು ಪತ್ರಕರ್ತೆಯರು ಮೀಟೂ ಆರೋಪ ಮಾಡಿದ್ದರು. ಇದರಿಂದ ಅಂತಿಮವಾಗಿ ಅಕ್ಬರ್ ಅವರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಯಿತು. 
ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಮೀಟೂ
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮೀಟೂ ಆರೋಪ ಮಾಡಿದ್ದರು. ಇದು ಕನ್ನಡ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಶ್ರುತಿ ಹರಿಹರನ್ ಮೀಟೂ ಆರೋಪ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾದವು. ಶ್ರುತಿ ಹರಿಹರನ್ ನಂತರ ಗಂಡ-ಹೆಂಡತಿ ಚಿತ್ರದ ನಿರ್ದೇಶಕ ರವಿ ಶ್ರೀವತ್ಸ ವಿರುದ್ಧ ನಟಿ ಸಂಜನಾ ಗಲ್ರಾನಿ ಮೀಟೂ ಬಾಂಬ್ ಸಿಡಿಸಿದ್ದರು. ಪರ ವಿರೋಧ ಚರ್ಚೆ ನಡೆದ ನಂತರ ಸಂಜನಾ ರವಿ ಶ್ರೀವತ್ಸರಲ್ಲಿ ಕ್ಷಮೆ ಕೇಳುವ ಮೂಲಕ ಇದಕ್ಕೆ ಅಂತ್ಯವಾಡಿದ್ದರು. ಇದಾದ ಬಳಿಕ ಎರಡನೇ ಸಲ ನಟಿ ಸಂಗೀತಾ ಭಟ್ ಸಹ ಲೈಂಗಿಕ ಕಿರುಕುಳದ ಬಗ್ಗೆ ಬರೆದುಕೊಂಡಿದ್ದರು. ಇದರಿಂದ ಆಕ್ರೋಶಗೊಂಡ ನಿರ್ದೇಶಕ ಗುರುಪ್ರಸಾದ್ ತಮ್ಮನ್ನು ಪತಿವ್ರತೆ ಅಂತ ತೋರಿಸಿಕೊಳ್ಳಲು ಕೆಲ ನಟಿಯರು ಮೀಟೂ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದು ಇದು ಕನ್ನಡ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಅಲ್ಲದೆ ಗುರುಪ್ರಸಾದ್ ವಿರುದ್ಧ ಕೆಲ ದೂರುಗಳು ದಾಖಲಾದವು. ಈ ಮೀಟೂ ಆರೋಪಗಳು ಅಲ್ಲಿಗೆ ಮುಗಿಯದೆ ನಟಿ ಪಾರ್ವತಿ, ಅಮಲಾ ಪೌಲ್ ಸಹ ಮೀಟೂ ಆರೋಪಗಳನ್ನು ಮಾಡಿದ್ದರು.
ಐಐಎಸ್ಸಿಯಲ್ಲೂ ಮೀಟೂ ಘಾಟು
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಧೆಯ ಪ್ರೊಫೆಸರ್ ಗಿರಿಧರ್ ಮದ್ರಾಸ್ ಅವರ ವಿರುದ್ಧ ಡಾಕ್ಟರೇಟ್ ವಿದ್ಯಾರ್ಥಿಯೊಬ್ಬರು ಮೀಟೂ ಆರೋಪ ಮಾಡಿದ್ದು ಇದರ ಪರಿಣಾಮ ಗಿರಿಧರ್ ಮದ್ರಾಸ್ ಅವರಿಗೆ ಕಡ್ಡಾಯ ನಿವೃತ್ತಿ ಮೇಲೆ ಕಳುಹಿಸಲಾಗಿತ್ತು.
ಮೀಟೂ ಉಗಮ
2006ರಲ್ಲಿ ಅಮೆರಿಕದ ಸಾಮಾಜಿಕ ಹೋರಾಟಗಾರ್ತಿ ತರಾನಾ ಬರ್ಕ್ MeToo ಚಳುವಳಿಯನ್ನು ಆರಂಭಿಸಿದ್ದರು. ಕಳೆದ ವರ್ಷಗಳಲ್ಲಿ ಜಗತ್ತಿನ ವಿವಿಧ ಕಡೆಗಳಿಂದ ಈ ಅಭಿಯಾನಕ್ಕೆ ಮತ್ತಷ್ಟು ಹುರುಪು, ಚುರುಕು ದಕ್ಕಿತ್ತು. ನೊಬೆಲ್ ಸಾಹಿತ್ಯ ಪುರಸ್ಕಾರ ಆಯ್ಕೆ ಸಮಿತಿಯಲ್ಲಿ ಸದಸ್ಯರಾಗಿದ್ದ ಜೇನ್ ಕ್ಲೌಡ್ ಅರ್ನಾಲೆಟ್ ವಿರುದ್ಧವೂ ಲೈಂಗಿಕ ಕಿರುಕುಳ, ಅತ್ಯಾಚಾರ ಆರೋಪ ಕೇಳಿ ಬಂದಿತ್ತು. ಇದರಿಂದ ಜೇನ್ ಕ್ಲೌಡ್ ಶಿಕ್ಷೆಗೂ ಗುರಿಯಾದರು.
SCROLL FOR NEXT