ದೇಶ

ಪ್ರಧಾನಿಯ ಸಮಾವೇಶ ಮುಗಿಸಿ ಬರುತ್ತಿದ್ದ ಪೇದೆಯ ಮೇಲೆ ಕಲ್ಲು ತೂರಾಟ, ಹತ್ಯೆ!

Srinivas Rao BV
ಘಾಜಿಯಾಪುರ: ಉತ್ತರ ಪ್ರದೇಶದಲ್ಲಿ ಕಾನೂನು ರಕ್ಷಕರನ್ನೇ ಹತ್ಯೆ ಮಾಡಲಾಗುತ್ತಿದ್ದು, ಹೊಸ ಘಟನೆಯೊಂದರಲ್ಲಿ ಕಲ್ಲು ತೂರಾಟಗಾರ ಗುಂಪಿನ ದಾಳಿಗೆ ಪೊಲೀಸ್ ಪೇದೆ ಬಲಿಯಾಗಿದ್ದಾರೆ. 
ಘಾಜಿಯಾಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡಿ ವಾಪಸ್ಸಾಗುತ್ತಿದ್ದ ಪೊಲೀಸ್ ಪೇದೆ ಮೇಲೆ ಸಮಾಜವಾದಿ ಪಕ್ಷದ ಮಿತ್ರ ಪಕ್ಷವಾಗಿರುವ ನಿಶಾದ್ ಪಾರ್ಟಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದು, ಪೊಲೀಸ್ ಪೇದೆಯನ್ನು ಹತ್ಯೆ ಮಾಡಿದ್ದಾರೆ.
ನಾನೆರಾ ಪೊಲೀಸ್ ಠಾಣೆಯ ಪೇದೆ ಸುರೇಶ್ ವತ್ಸ್ (48) ಮೃತ ಪೇದೆಯಾಗಿದ್ದಾರೆ. ನಿಶಾದ್ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ನಿಶಾದ್ ಪಕ್ಷದ ಕಾರ್ಯಕರ್ತರು, ರಾಜ್ಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ನಡೆಸುತ್ತಿದ್ದ ಜಾಗದಿಂದ ತೆರಳುವಂತೆ ಪೊಲೀಸ್ ಪೇದೆಗಳು ಸೂಚಿಸಿದಾಗ ಪ್ರತಿಭಟನಾ ನಿರತರು ಕಲ್ಲು ತೂರಾಟ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಸುರೇಶ್ ವತ್ಸ್ ಎಂಬ ಪೊಲೀಸ್ ಪೇದೆಯ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಪೇದೆ ಆ ವೇಳೆಗೆ ಮೃತಪಟ್ಟಿದ್ದರು. 
ಘಟನೆ ತಿಳಿಯುತ್ತಿದ್ದಂತೆಯೇ ಎಸ್ಎಸ್ ಪಿ ಯಶ್ವೀರ್ ಸಿಂಗ್ ಘಾಜಿಯಾಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೆ ಬಾಲಾಜಿ ಸ್ಥಳಕ್ಕೆ ಆಗಮಿಸಿದರಾದರೂ ಆ ವೇಳೆಗೆ ಪ್ರತಿಭಟನಾ ನಿರತರು, ಪೊಲೀಸ್ ಪೇದೆಯ ಹಂತಕರು ದೌಡಾಯಿಸಿದ್ದರು. ಘಟನೆ ಬಗ್ಗೆ ಮಾಹಿತಿ ಪಡೆದಿರುವ ಸಿಎಂ ಯೋಗಿ ಆದಿತ್ಯನಾಥ್ ಘಟನೆಗೆ ಕಾರಣರಾದವರನ್ನು ತಕ್ಷಣವೇ ಬಂಧಿಸುವಂತೆ ಸೂಚನೆ ನೀಡಿದ್ದಾರೆ. ಮೃತ ಪೊಲೀಸ್ ಪೇದೆ ಕುಟುಂಬಕ್ಕೆ 40 ಲಕ್ಷ ರೂ ಪರಿಹಾರ ಘೋಷಿಸಿದ್ದು ಪೊಲೀಸ್ ಪೇದೆಯ ಪೋಷಕರಿಗೆ 10 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. 
ನಿಶಾದ್ ಪಕ್ಷದ ಕಾರ್ಯಕರ್ತರು ಜಿಲ್ಲಾ ಹೆಡ್ ಕ್ವಾರ್ಟರ್ಸ್ ಬಳಿ ಪ್ರತಿಭಟನೆ ಮಾಡಲು ಮನವಿ ಸಲ್ಲಿಸಿದ್ದರು. ಆದರೆ ಪ್ರಧಾನಿ ರ್ಯಾಲಿ ಇದ್ದಿದ್ದರಿಂದ ಇದಕ್ಕೆ ಅವಕಾಶ ನೀಡಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಪ್ರತಿಭಟನಾ ನಿರತರು ಬಿಜೆಪಿ ಕಾರ್ಯಕರ್ತರ ಮೇಲೂ ಕಲ್ಲು ತೂರಾಟ ನಡೆಸಿದ್ದರು. 
SCROLL FOR NEXT