ಕಾಶ್ಮೀರ: ಮಗುವಿಗೆ ಜನ್ಮ ನೀಡಿದ 65 ವರ್ಷದ ವೃದ್ಧೆ, ಶಿಶುವಿನ ತಂದೆಗೆ 80 ವರ್ಷ!
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ 65 ವರ್ಷದ ವೃದ್ಧೆ ಮಗುವಿಗೆ ಜನ್ಮ ನೀಡಿದ್ದು, ಇದು ಅಲ್ಲಾಹು ಮಾಡಿರುವ ಪವಾಡ ಎಂದು ನವಜಾತ ಶಿಶುವಿನ 80 ವರ್ಷದ ತಂದೆ ಹೇಳಿದ್ದಾರೆ.
ಮೇಲ್ ಆನ್ ಲೈನ್ ಎಂಬ ಅಂತರ್ಜಾಲ ಪತ್ರಿಕೆ ಪ್ರಕಟಿಸಿರುವ ವರದಿಯ ಪ್ರಕಾರ ಹಕೀಂ ದಿನ್ ಎಂಬ 80 ವರ್ಷದ ವೃದ್ಧ ವ್ಯಕ್ತಿ ತಂದೆಯಾಗಿದ್ದು, ದೇವರು ತನಗೆ ಅತ್ಯಮೂಲ್ಯವಾದ ಉಡುಗೊರೆ ನೀಡಿದ್ದಾನೆ ಎಂದು ಹೇಳಿದ್ದಾರೆ.
65 ನೇ ವಯಸ್ಸಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ ಈಗ ವಿಶ್ವದಲ್ಲಿ ನವಜಾತ ಶಿಶುವನ್ನು ಹೊಂದಿರುವ ಹಿರಿಯ ತಾಯಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಆಸ್ಪತ್ರೆಯಲ್ಲಿ ಮಗು ಜನಿಸಿದ್ದು, ವೃದ್ಧ ದಂಪತಿಗಳಿಗೆ ಈಗಾಗಲೇ 10 ವರ್ಷದ ಮಗನಿದ್ದಾನೆ.
ಈ ಪ್ರಕರಣ ವೈದ್ಯ ಲೋಕಕ್ಕೆ ಅಚ್ಚರಿಯಾಗಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ತಂದೆ ಹಕೀಂ ದಿನ್ ಮಗುವಿನ ಪೋಷಣೆಗೆ ಸರ್ಕಾರದ ನೆರವಿಗೆ ಮನವಿ ಮಾಡಿದ್ದಾರೆ.