ನವದೆಹಲಿ: ಸೊಹ್ರಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಸಿಬಿಐ ತನಿಖಾ ಸಂಸ್ಥೆಯನ್ನು ಕಾಂಗ್ರೆಸ್ ಪಕ್ಷವೇ ಕೊಂದು ಹಾಕಿದ್ದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಆರೋಪಿಸಿದ್ದಾರೆ.
ತಮ್ಮ ಬ್ಲಾಗ್ ನಲ್ಲಿ ಈ ಕುರಿತಂತೆ ಬರೆದುಕೊಂಡಿರುವ ಅವರು, ಕೇಂದ್ರ ತನಿಖಾ ಸಂಸ್ಥೆಗಳ ಸ್ವತಂತ್ರತೆ ಬಗ್ಗೆ ಇಂದು ಆತಂಕ, ಕಳವಳ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ 2004ರಿಂದ 2014ರವರೆಗೆ ಯುಪಿಎ ಅಧಿಕಾರಾವಧಿ ಸಂದರ್ಭದಲ್ಲಿ ಏನು ಮಾಡಿತ್ತು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದಿದ್ದಾರೆ.
ತನಿಖಾ ಸಂಸ್ಥೆಗಳಿಗೆ ಕಾಂಗ್ರೆಸ್ ಮಾಡಿರುವ ಹಾನಿಯ ಬಗ್ಗೆ ಸಾಕಷ್ಟು ಪುರಾವೆಗಳಿವೆ. ಇಂದು ಸಿಬಿಐ ಸ್ವತಂತ್ರತೆ ಬಗ್ಗೆ ಆತಂಕ ವ್ಯಕ್ತಪಡಿಸುವ ಕಾಂಗ್ರೆಸ್ ಅಂದು ಅಧಿಕಾರದಲ್ಲಿದ್ದಾಗ ಏನು ಮಾಡಿತ್ತು ಎಂಬ ಬಗ್ಗೆ ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಜೇಟ್ಲಿ ಬ್ಲಾಗ್ ನಲ್ಲಿ ಬರೆದಿದ್ದಾರೆ.
ಸೊಹ್ರಬುದ್ದೀನ್ ಎನ್ ಕೌಂಟರ್ ಸುಳ್ಳು, ಅವರನ್ನು ಯಾರೂ ಕೊಂದಿರಲಿಲ್ಲ, ಅವರು ಸಹಜವಾಗಿ ಸಾವಿಗೀಡಾಗಿದ್ದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. ಸಿಬಿಐ ವಿಶೇಷ ನ್ಯಾಯಾಲಯ 22 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿದ ನಂತರ ರಾಹುಲ್ ಗಾಂಧಿ ಈ ರೀತಿ ಟ್ವೀಟ್ ಮಾಡಿದ್ದರು.ಇದಕ್ಕೆ ಜೇಟ್ಲಿ ತಿರುಗೇಟು ನೀಡಿದ್ದಾರೆ.