ನವದೆಹಲಿ: ದೆಹಲಿಯ ಕರವಾಲ್ ನಗರದ ಜೀವನ ಜ್ಯೋತಿ ಸೀನಿಯರ್ ಸೆಕೆಂಡರಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಯ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತರನ್ನು ಬಂಧಿಸಿರುವುದಾಗಿ ಶುಕ್ರವಾರ ದೆಹಲಿ ಪೊಲೀಸರು ತಿಳಿಸಿದ್ದಾರೆ.
ನಿನ್ನೆ 16 ವರ್ಷದ ವಿದ್ಯಾರ್ಥಿ ತುಷಾರ್ ಶಾಲೆಯ ಶೌಚಾಲಯದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಬಳಿಕ ಆತನನ್ನು ಜಿಟಿಬಿ ಆಸ್ಪತ್ರೆಗೆ ತೆಗೆದುಕೊಂಡ ಹೋಗಲಾಗಿತ್ತು. ಆದರೆ ದಾರಿ ಮಧ್ಯೆಯೇ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು.
ಶೌಚಾಲಯದ ಸಮೀಪ ವಿದ್ಯಾರ್ಥಿಗಳ ಗುಂಪೊಂದು 9ನೇ ತರಗತಿಯ ವಿದ್ಯಾರ್ಥಿ ತುಷಾರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಶಾಲೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತುಷಾರ್ ಮೇಲೆ ಹಲ್ಲೆ ನಡೆಸಿದ ಮೂವರು ವಿದ್ಯಾರ್ಥಿಗಳನ್ನು ಬಂಧಿಸಿದ್ದು, ಮತ್ತೊಬ್ಬ ತಪ್ಪಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಮಧ್ಯೆ, ಶಾಲಾ ಆಡಳಿತ ಮಂಡಳಿಯವರು ತುಷಾರ್‌ನ ಸಾವಿಗೆ ಬೇರೆಯ ಕಾರಣ ನೀಡಿದ್ದು, ತುಷಾರ್ ಡಯೋರಿಯಾದಿಂದ ಬಳಲುತ್ತಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಆದರೆ ತುಷಾರ್ ಪೋಷಕರು ಸಹಪಾಠಿ ವಿದ್ಯಾರ್ಥಿಗಳು ತಮ್ಮ ಮಗನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ, ಮೂವರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದಿದ್ದಾರೆ.