ದೇಶ

ಪದ್ಮಾವತ್ ರಜಪೂತರ ಪರಾಕ್ರಮವನ್ನು ವೈಭವೀಕರಿಸುತ್ತದೆ: ಪ್ರತಿಭಟನೆ ವಾಪಸ್ ಪಡೆದ ಕರ್ಣಿ ಸೇನಾ

Srinivasamurthy VN
ಮುಂಬೈ: ಪದ್ಮಾವತ್ ಚಿತ್ರದಲ್ಲಿ ರಜಪೂತರ ಶೌರ್ಯವನ್ನು ವೈಭವೀಕರಿಸಲಾಗಿದ್ದು, ಚಿತ್ರದ ವಿರುದ್ಧದ ನಮ್ಮ ಪ್ರತಿಭಟನೆಯನ್ನು ವಾಪಸ್ ಪಡೆಯುತ್ತೇವೆ ಎಂದು ಕರ್ಣಿ ಸೇನೆಯ ಮುಂಬೈ ಘಟಕದ ಅಧ್ಯಕ್ಷ ಯೋಗೇಂದ್ರ ಸಿಂಗ್ ಕಟಾರ್ ಹೇಳಿದ್ದಾರೆ.
ಈ ಬಗ್ಗೆ ರಾಷ್ಟ್ರೀಯ ಘಟಕದ ಅಧ್ಯಕ್ಷರಾದ ಸುಖದೇವ್ ಸಿಂಗ್ ಗೋಗಮದಿ ಅವರಿಂದಲೂ ನಮಗೆ ಸೂಚನೆ ಬಂದಿದ್ದು, ಸಂಘಟನೆಯ ಕೆಲ ಪ್ರಮುಖರ ಚಿತ್ರ ವೀಕ್ಷಣೆ ಮಾಡಿದ್ದಾರೆ. ಆ ಬಳಿಕವೇ ಈ ನಿರ್ಧಾರಕ್ಕೆ ಬರಲಾಗಿದೆ ಎಂದು   ಯೋಗೇಂದ್ರ ಸಿಂಗ್ ಹೇಳಿದ್ದಾರೆ. ಚಿತ್ರದಲ್ಲಿ ಈ ಹಿಂದೆ ಇದ್ದ ಮತ್ತು ನಮ್ಮ ಆಕ್ಷೇಪಕ್ಕೆ ಕಾರಣವಾಗಿದ್ದ ಎಲ್ಲ ಸನ್ನಿವೇಶಗಳನ್ನು ತೆಗೆದು ಹಾಕಲಾಗಿದ್ದು, ರಾಣಿ ಪದ್ಮಾವತಿಯ ಚಾರಿತ್ರ್ಯ ವಧೆ ಮಾಡುವ ಸನ್ನಿವೇಶಗಳಿಲ್ಲ. ಚಿತ್ರದಲ್ಲಿ  ರಜಪೂತರ ಶೌರ್ಯ ಮತ್ತು ಸಾಹಸವನ್ನು ವೈಭವೀಕರಿಸಲಾಗಿದ್ದು, ಚಿತ್ರ ವೀಕ್ಷಣೆ ಬಳಿಕ ಪ್ರತೀಯೊಬ್ಬ ರಜಪೂತ ವಂಶಸ್ಥರೂ ಕೂಡ ಹೆಮ್ಮೆ ಪಡುತ್ತಾರೆ ಎಂದು ಹೇಳಿದ್ದಾರೆ.
ಅಂತೆಯೇ ದೆಹಲಿ ಸುಲ್ತಾನ ಅಲ್ಲಾವುದೀನ್ ಖಿಲ್ಜಿ ಮತ್ತು ಮೇವಾರ ರಾಣಿ ಪದ್ಮಾವತಿ ನಡುವೆ ಯಾವುದೇ ಸನ್ನಿವೇಶಗಳಿಲ್ಲ. ಚಿತ್ರದಲ್ಲಿ ನಮ್ಮ ಭಾವನೆಗಳಿಗೆ ಧಕ್ಕೆಯಾಗುವ ಅಂಶಗಳಿಲ್ಲ. ಅಲ್ಲದೆ ಘೂಮರ್ ಹಾಡಿನಲ್ಲಿದ್ದ ರಾಣಿ  ಪದ್ಮಾವತಿ ವೇಷಧಾರಿ ದೀಪಿಕಾ ಪಡುಕೋಣೆ ಸೊಂಟದ ಭಾಗವನ್ನು ಗ್ರಾಫಿಕ್ಸ್ ಮೂಲಕ ಮುಚ್ಚಲಾಗಿದೆ. ಈ ಕಾರಣಕ್ಕೆ ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಗುಜರಾತ್ ಮತ್ತು ಹರ್ಯಾಣದ ಘಟಕಗಳಿಗೆ ಪತ್ರ  ಬರೆಯಲಾಗಿದ್ದು, ಪ್ರತಿಭಟನೆ ವಾಪಸ್ ಪಡೆಯುವಂತೆ ಸೂಚನೆ ನೀಡಲಾಗಿದೆ. ದೇಶಾದ್ಯಂತ ಪದ್ಮಾವತ್ ಚಿತ್ರ ಬಿಡುಗಡೆಯಾಗುವಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.
ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ ಪದ್ಮಾವತ್ 200 ಕೋಟಿ ಗಳಿಕೆ
ಇತ್ತ ವಿರೋಧ ಮತ್ತು ನಿಷೇಧಗಳ ನಡುವೆಯೇ ಪೊಲೀಸ್ ಭದ್ರತೆಯಲ್ಲಿ ಬಿಡುಗಡೆಯಾಗಿದ್ದ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರ ನಿರೀಕ್ಷೆಗೂ ಮೀರಿದ ಯಶಸ್ಸು ಗಳಿಸಿದ್ದು, ಬಾಕ್ಸ್ ಆಫೀಸ್ ನಲ್ಲಿ  ಧೂಳೆಬ್ಬಿಸಿದೆ. ಬಿಡುಗಡೆಯಾದ ಆರಂಭಿಕ ದಿನಗಳಲ್ಲಿ ಚಿತ್ರದ ಗಳಿಕೆ ಮಂಕಾಗಿತ್ತಾದರೂ, ದಿನಗಳೆದಂತೆ ಚಿತ್ರದ ಗಳಿಕೆ ಜೋರಾಗಿದೆ. ಚಿತ್ರ ಬಿಡುಗಡೆಯಾದ ಕೇವಲ 9 ದಿನಗಳಲ್ಲಿ ಪದ್ಮಾವತ್ ಚಿತ್ರ ಬರೊಬ್ಬರಿ 200 ಕೋಟಿ  ಗಳಿಸಿದೆ ಎಂದು ತಿಳಿದುಬಂದಿದೆ. 
SCROLL FOR NEXT