ನವದೆಹಲಿ: ತಮ್ಮ ಪಕ್ಷದ ವಿರುದ್ಧವೇ ವಾಗ್ದಾಳಿ ಮುಂದುವರೆಸಿರುವ ಬಿಜೆಪಿ ಸಂಸದ ಶತ್ರುಜ್ಞ ಸಿನ್ಹಾ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ಸಚಿವರ ಸ್ಥಾನಮಾನ ಕಡಿಮೆಯಾಗಿದೆ ಎಂದು ಸೋಮವಾರ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಇಬ್ಬರು ವ್ಯಕ್ತಿಗಳ ಸೇನೆಯಾಗುತ್ತಿದೆ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿನ್ಹಾ, ಸರ್ಕಾರ ಏಕ ವ್ಯಕ್ತಿ ಸೈನ್ಯವಾಗಿದ್ದು, ಪಕ್ಷ ಇಬ್ಬರು ವ್ಯಕ್ತಿಗಳ ಸೇನೆಯಾಗಿದೆ. ಇದು ನನಗೆ ಮಾತ್ರ ಅನಿಸುತ್ತಿಲ್ಲ. ನೀವು ಸೇರಿದಂತೆ ಹಲವರು ಹೀಗೆ ಭಾವಿಸಿದ್ದಾರೆ. ಆದರೆ ನಾವು (ಪಕ್ಷ ಮತ್ತು ಸರ್ಕಾರ) ಸಾಮೂಹಿಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದರು.
ಕೇಂದ್ರ ಸಚಿವ ಸ್ಥಾನಮಾನ ಕಡಿಮೆಯಾಗಿದೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು. ಹಲವು ಜನಕ್ಕೆ ಕೇಂದ್ರದ ಶೇ.80ರಷ್ಟು ಸಚಿವರು ಗೊತ್ತೇ ಇಲ್ಲ. ಗೊತ್ತಿದ್ದರೂ ಅವರು ನಿಷ್ಪ್ರಯೋಜಕರು ಎಂದು ಜನ ಭಾವಿಸಿರುವುದಾಗಿ ಶತ್ರುಘ್ನ ಸಿನ್ಹಾ ತಮ್ಮ ಸರ್ಕಾರದ ವಿರುದ್ಧವೇ ಕಿಡಿಕಾರಿದ್ದಾರೆ.