ನವದೆಹಲಿ: ಶಾಲೆಯಿಂದ ಮನೆಗೆ ತೆರಳುತ್ತಿದ್ದ ಶಾಲಾ ವಾಹನದಿಂದಲೇ ಬಾಲಕನನ್ನು ಅಪಹರಣ ಮಾಡಿದ್ದ ಪ್ರಕರಣಕ್ಕೆ ದೆಹಲಿ ಪೊಲೀಸರು ಸುಖಾಂತ್ಯ ನೀಡಿದ್ದು, ಆರೋಪಿಯನ್ನು ಗುಂಡಿಕ್ಕಿ ಕೊಲ್ಲುವ ಮೂಲಕ 5 ವರ್ಷದ ಬಾಲಕನನ್ನು ರಕ್ಷಣೆ ಮಾಡಿದ್ದಾರೆ.
ಕಳೆದ ಜನವರಿ 25ರಂದು ದೆಹಲಿಯ ದಿಲ್ ಶಾದ್ ಪ್ರದೇಶದಲ್ಲಿ ಶಾಲೆಯಿಂದ ಮನೆಗೆ ತೆರಳುತ್ತಿದ್ದ ಶಾಲಾ ವಾಹನದ ಮೇಲೆ ದಾಳಿ ಮಾಡಿದ್ದ ಶಸ್ತ್ರಸಜ್ಜಿತ ದುಷ್ಕ್ಮಿಗಳು ಚಾಲಕನ ಮೇಲೆ ಹಲ್ಲೆ ಮಾಡಿ ಬಾಲಕನನ್ನು ಅಪಹರಣ ಮಾಡಿದ್ದರು. ಈ ಅಪಹರಣ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಆರೋಪಿಗಳ ಶೋಧಕ್ಕೆ ಮುಂದಾಗಿದ್ದರು. ಸತತ 10 ದಿನಗಳ ಬಳಿಕ ಆರೋಪಿಗಳ ಸುಳಿವು ಪಡೆದ ಪೊಲೀಸರು ನಿನ್ನೆ ದೆಹಲಿಯಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಸಾಹಿಬಾದ್ ಪ್ರದೇಶದ ಆಪಾರ್ಟ್ ಮೆಂಟ್ ಮೇಲೆ ದಾಳಿ ಮಾಡಿ ಆರೋಪಿಗಳನ್ನು ಸುತ್ತುವರೆದಿದ್ದಾರೆ.
ಈ ವೇಳೆ ಆರೋಪಿಯೋರ್ವ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಗುಂಡು ಹಾರಿಸಿದ್ದು, ಈ ವೇಳೆ ಆತ ಮೃತಪಟ್ಟಿದ್ದಾನೆ. ಅಂತೆಯೇ ಇತರೆ ಇಬ್ಬರು ಆರೋಪಿಗಳಿಗೆ ಗುಂಡೇಟು ತಗುಲಿದ್ದು ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳೆದ 10 ದಿನಗಳಿಂದ ಬಾಲಕನನ್ನು ಇದೇ ಆಪಾರ್ಟ್ ಮೆಂಟ್ ನಲ್ಲಿ ಆರೋಪಿಗಳು ಇರಿಸಿಕೊಂಡಿದ್ದರಂತೆ. ಕಳೆದ ಜನವರಿ 28ರಂದು 50 ಲಕ್ಷ ರು.ಗಾಗಿ ಪೋಷಕರ ಬಳಿ ಬೇಡಿಕೆ ಇಟ್ಟಿದ್ದರಂತೆ.
ಇದೀಗ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದ್ದು, ಬಾಲಕನನ್ನು ರಾತ್ರಿಯೇ ಪೋಷಕರ ವಶಕ್ಕೆ ನೀಡಲಾಗಿದೆ. ಇನ್ನು ಬಾಲಕನನ್ನು ವಶಕ್ಕೆ ಪಡೆದ ಪೋಷಕರು ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics