ಚೆನ್ನೈ: ಕೋರ್ಟ್ ಗೆ ಸುಳ್ಳು ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಮದ್ರಾಸ್ ಹೈಕೋರ್ಟ್ ಕ್ಷಮೆ ಯಾಚಿಸಿದ್ದಾರೆ.
ಮಧುರೈ ಪೀಠ ವ್ಯವಹಾರಗಳಲ್ಲಿ ಸ್ವಾಮಿ ನಿತ್ಯಾನಂದ ಹಸ್ತಕ್ಷೇಪ ಮಾಡದಂತೆ ಆದೇಶ ನೀಡಬೇಕು ಎಂದು ಕೋರಿ ವ್ಯಕ್ತಿಯೋರ್ವ ಮದ್ರಾಸ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣ ಸಂಬಂಧ ನಿತ್ಯಾನಂದ ತಪ್ಪು ಮಾಹಿತಿಯನ್ನು ಅಫಿಡವಿಟ್ ನಲ್ಲಿ ತಿಳಿಸಿರುವುದನ್ನು ಗಮನಿಸಿದ ನ್ಯಾಯಮೂರ್ತಿಗಳು ಸರಿಯಾದ ಮಾಹಿತಿಯನ್ನು ಸೂಕ್ತ ವಿವರಗಳೊಂದಿಗೆ ಅಫಿಡವಿಟ್ ಸಲ್ಲಿಸುವಂತೆ ನಿತ್ಯಾನಂದನ ಪರ ವಕೀಲರಿಗೆ ಆದೇಶಿಸಿದ್ದರು.
ಇದಕ್ಕೂ ಮುನ್ನ ಕೋರ್ಟ್ ಗೆ ನಿತ್ಯಾನಂದ ಸುಳ್ಳು ಹೇಳಿಕೆ ನೀಡಿರುವುದಕ್ಕೆ ತೀವ್ರ ಅಸಮಾಧಾನಗೊಂಡಿದ್ದ ಕೋರ್ಟ್, ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ನ್ಯಾಯಸ್ಥಾನವನ್ನು ತಪ್ಪುದಾರಿಗೆ ಎಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ನ್ಯಾಯಮೂರ್ತಿ ಆರ್.ಮಹದೇವನ್ ಅವರು ನಿತ್ಯಾನಂದನನ್ನು ಬಂಧಿಸಿ ಬುಧವಾರದೊಳಗೆ ಕೋರ್ಟ್ ಮುಂದೆ ಹಾಜರುಪಡಿಸುವಂತೆ ಜ.29 ರಂದು ಪೊಲೀಸರಿಗೆ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ನಿತ್ಯಾನಂದ ಕೋರ್ಟ್ ಕ್ಷಮೆ ಯಾಚಿಸಿದ್ದು ಮಧುರೈ ಪೀಠಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಹೇಳಿಕೆಗಳನ್ನು ವಾಪಸ್ ಪಡೆಯುತ್ತಿರುವುದಾಗಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics