ದೇಶ

ಏರ್‌ಸೆಲ್‌–ಮ್ಯಾಕ್ಸಿಸ್‌ ಹಗರಣ: ಕರಡು ತನಿಖಾ ವರದಿ ಚಿದಂಬರಂ ಮನೆ ತಲುಪಿದ್ದು ಹೇಗೆ? ಸಿಬಿಐನಿಂದ ತನಿಖೆ

Lingaraj Badiger
ನವದೆಹಲಿ: ಏರ್‌ಸೆಲ್‌ –ಮ್ಯಾಕ್ಸಿಸ್‌ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಿದ್ಧಪಡಿಸಿದ್ದ ತನಿಖಾ ವರದಿಯ ಕರಡು ಪ್ರತಿ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರ ಮನೆ ತಲುಪಿದ್ದು ಹೇಗೆ ಎಂಬುದರ ಕುರಿತು ಸಿಬಿಐ ಆಂತರಿಕೆ ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಚಿದಂಬರಂ ಮನೆ ಮೇಲೆ ದಾಳಿ ನಡೆಸಿದ್ದ ವೇಳೆ 2013ರಲ್ಲಿ ಸಿಬಿಐ ಸಿದ್ಧಪಿಡಿಸಿದ್ದ ತನಿಖಾ ವರದಿಯ ಕರಡು ಪ್ರತಿಯನ್ನು ಜಪ್ತಿ ಮಾಡಿತ್ತು. 
ಏರ್‌ಸೆಲ್‌ –ಮ್ಯಾಕ್ಸಿಸ್‌  ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು (ಇಡಿ) ಕಳೆದ ಜನವರಿ 13ರಂದು ದೆಹಲಿಯ ಜೋರ್ ಬಾಗ್ ನಲ್ಲಿರುವ ಚಿದಂಬರಂ ಅವರ ನಿವಾಸದ ಮೇಲೆ ದಾಳಿ ಮಾಡಿತ್ತು. ಈ ವೇಳೆ ಕೆಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ.
ಜನವರಿ 13ರಂದು ಇಡಿ ಅಧಿಕಾರಿಗಳು ದೆಹಲಿಯಲ್ಲಿರುವ ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ಅವರ ನಿವಾಸ ಮತ್ಕು ಕಚೇರಿ ಮೇಲೆ ದಾಳಿ ನಡೆಸಿತ್ತು.  ಅಲ್ಲದೆ ಕಾರ್ತಿ ಚಿದಂಬರಂ ಅವರ ಚೆನ್ನೈಯಲ್ಲಿರುವ ಆಪ್ತ ಸಹಾಯಕ ಮತ್ತು ಲೆಕ್ಕ ಪರಿಶೋಧಕರ ಮನೆಗಳಲ್ಲೂ ಶೋಧ ನಡೆಸಿದ್ದರು.
ಚಿದಂಬರಂ ಅವರ ನಿವಾಸದಲ್ಲಿ ಪತ್ತೆಯಾದ ಕರಡು ಪ್ರತಿ ಬಗ್ಗೆ ಇಡಿ ಅಧಿಕಾರಿಗಳು ಸಿಬಿಐಗೆ ಮಾಹಿತಿ ನೀಡಿದ್ದು, ತನಿಖಾ ವರದಿ ಸೋರಿಕೆಯಾಗಿದ್ದು ಹೇಗೆ ಎಂಬುದುರ ಕುರಿತು ಈಗ ಸಿಬಿಐ ಆಂತರಿಕ ತನಿಖೆ ನಡೆಸುತ್ತಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಇನ್ನು ಈ ಬಗ್ಗೆ ಯಾವುದೇ ಹೇಳಿಕೆ ನೀಡಲು ಪಿ.ಚಿದಂಬರಂ ಅವರು ನಿರಾಕರಿಸಿದ್ದು, ಈ ಹಿಂದೆ ಇಡಿ ದಾಳಿ ನಡೆಸಿದಾಗ, ಅಧಿಕಾರಿಗಳಿಗೆ ಮನೆಯಲ್ಲಿ ಏನೂ ಸಿಗದ ಕಾರಣ ಮುಜುಗರಗೊಂಡು ಕ್ಷಮೆಯಾಚಿಸಿ ತೆರಳಿದ್ದಾರೆ ಎಂದು ಹೇಳಿದ್ದರು.
SCROLL FOR NEXT