ನವದೆಹಲಿ: ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷ ರಾಹುಲ್ ಗಾಂಧಿ ತನಗೂ ಕೂಡ ಬಾಸ್ ಇದ್ದಂತೆ, ಅವರ ಮುಂದಾಳತ್ವದಲ್ಲೇ ಪಕ್ಷ ಮುನ್ನಡೆಯಲಿದ್ದು, ಈ ಬಗ್ಗೆ ಯಾವುದೇ ರೀತಿಯ ಅನುಮಾನ ಬೇಡ ಎಂದು ಕಾಂಗ್ರೆಸ್ ಪಕ್ಷದ ವರಿಷ್ಟ ನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ.
ಗುರುವಾರ ನಡೆದ ಪಕ್ಷದ ಸಂಸದೀಯ ಸಭೆಯಲ್ಲಿ ಮಾತನಾಡಿದ ಸೋನಿಯಾಗಾಂಧಿ, ಸಮಾನ ಮನಸ್ಕ ಪಕ್ಷಗಳು ಒಂದಾಗುವ ಕಾಲ ಬಂದಿದ್ದು, ಎಲ್ಲರೂ ಒಟ್ಟುಕೂಡಿ ಬಿಜೆಪಿಯನ್ನು ಎದುರಿಸಬೇಕಿದೆ. ಸಾಂಘಿಕ ಹೋರಾಟದಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆಡಳಿತಾ ರೂಢ ಬಿಜೆಪಿಯನ್ನು ಸೋಲಿಸಬೇಕಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಸೋಲು ಖಚಿತ ಎಂದು ಸೋನಿಯಾ ಹೇಳಿದ್ದಾರೆ.
ಇದೇ ವೇಳೆ ಹಾಲಿ ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡಿದ ಸೋನಿಯಾ, ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪನೆ ಮಾಡಬೇಕಾಗಿದೆ. ಬಿಜೆಪಿ ದುರಾಡಳಿತದಿಂದ ದೇಶದ ಜನತೆ ಬೇಸತ್ತಿದ್ದು, ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಉದಾರ, ಜಾತ್ಯತೀತ ಮತ್ತು ಪ್ರಜಾಪ್ರಭುತ್ವದ ಸಂಪ್ರದಾಯಗಳು ಬಿಜೆಪಿ ಆಡಳಿತದಲ್ಲಿ ಹಾನಿಗೊಳಗಾಗಿದ್ದು, ದೇಶದಲ್ಲಿ ಪ್ರಜಾಪ್ರಭುತ್ವವನ್ನು ಮರು ಸ್ಥಾಪಿಸಬೇಕಿದೆ ಎಂದು ಸೋನಿಯಾ ಹೇಳಿದ್ದಾರೆ.
ರಾಹುಲ್ ಗಾಂಧಿ ನನಗೂ ಕೂಡ ಬಾಸ್, ಈ ಬಗ್ಗೆ ಯಾವುದೇ ಅನುಮಾನ ಬೇಡ
ಇದೇ ವೇಳೆ ತಮ್ಮ ಪುತ್ರ ರಾಹುಲ್ ಗಾಂಧಿ ಕುರಿತು ಮಾತನಾಡಿದ ಸೋನಿಯಾ, ಕಾಂಗ್ರೆಸ್ ಪಕ್ಷದ ನೂತನ ಸಾರಥಿ ರಾಹುಲ್ ಗಾಂಧಿ ನನಗೂ ಕೂಡ ಬಾಸ್ ಇದ್ದಂತೆ. ಈ ಬಗ್ಗೆ ಯಾವುದೇ ರೀತಿಯ ಅನುಮಾನ ಬೇಡ, ಅಂತೆಯೇ ನಾನು ಅಧ್ಯಕ್ಷೆಯಾಗಿದ್ದ ಸಂದರ್ಭದಲ್ಲಿ ಹೇಗೆ ಪಕ್ಷಕ್ಕಾಗಿ ನಿಷ್ಠಳಾಗಿ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುತ್ತಿದ್ದೆನೋ ಅದೇ ರೀತಿ ಮುಂದೆಯೂ ರಾಹುಲ್ ಸಾರಥ್ಯದಲ್ಲಿ ಕಾರ್ಯ ನಿರ್ವಹಿಸುತ್ತೇನೆ. ಪಕ್ಷದ ಕಾರ್ಯಕರ್ತರೂ ಕೂಡ ಅದೇ ಉತ್ಸಾಹದಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಸೋನಿಯಾ ಕರೆ ನೀಡಿದರು.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ಹಂತದಲ್ಲಿ ಬಿಜೆಪಿ ಕೋಮು ಗಲಭೆ ಮೂಲಕ ಲಾಭ ಮಾಡಿಕೊಳ್ಳಲು ಹವಣಿಸುತ್ತಿದೆ. ಆದರೆ ನಾವು ಅದಕ್ಕೆ ಆಸ್ಪದ ನೀಡುವುದಿಲ್ಲ. ಪಕ್ಷದ ಸಂಸದರು, ಶಾಸಕರು ಹಾಗೂ ಕಾರ್ಯಕರ್ತ ನಿಷ್ಚೆ ಮತ್ತು ಶ್ರದ್ಧೆಯಿಂದ ಕೆಲಸ ಮಾಡಿದರೆ ಗೆಲುವ ಖಂಡಿತಾ ನಮ್ಮದಾಗುತ್ತದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಮುನ್ನಡೆಯಲಿದ್ದು, ಅವರಿಗೆ ನಮ್ಮೆಲ್ಲರ ಸಂಪೂರ್ಣ ಸಹಕಾರ ಅತ್ಯಗತ್ಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics