ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್
ಪಣಜಿ: ಮಾನವೀಯತೆ ನೆಲೆಯಲ್ಲಿ ಮಹದಾಯಿ ನದಿ ನೀರನ್ನು ಕುಡಿಯುವ ಉದ್ದೇಶಕ್ಕೆ ಕರ್ನಾಟಕಕ್ಕೆ ಹಂಚಿಕೆ ಮಾಡುವುದಾಗಿ ಮಾತುಕತೆ ನಡೆಸಿದ ಎರಡು ತಿಂಗಳ ನಂತರ ಇದೀಗ ಮತ್ತೊಮ್ಮೆ ಗೋವಾ ಸರ್ಕಾರ ತನ್ನ ಮಾತನ್ನು ಮುರಿದಿದೆ.
ನಿನ್ನೆ ಪ್ರತಿಕ್ರಿಯೆ ನೀಡಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್, ಕೇಂದ್ರ ಸರ್ಕಾರ ನೇಮಿಸಿರುವ ಅಂತರಾಜ್ಯ ನೀರು ವಿವಾದ ನ್ಯಾಯಾಧೀಕರಣವೇ ಮಹದಾಯಿ ನೀರು ಹಂಚಿಕೆ ಕುರಿತು ನಿರ್ಧರಿಸಲಿದೆ ಎಂದು ಹೇಳಿದ್ದಾರೆ.
ರಾಜ್ಯ ಸಚಿವಾಲಯದಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೈಕ್ಷಣಿಕ ಹಿತಾಸಕ್ತಿ ಕುರಿತು ಚರ್ಚೆ ನಡೆಸಲಾಯಿತು ಎಂದು ಹೇಳಿದರು.
ಶೈಕ್ಷಣಿಕ ಹಿತಾಸಕ್ತಿ ವಿಷಯಗಳ ಕುರಿತು ಮಾತ್ರ ಚರ್ಚೆ ನಡೆಸಿದವು. ಮಹದಾಯಿ ನದಿ ನೀರು ಹಂಚಿಕೆ ಕೇಸಿನ ಬಗ್ಗೆ ನಾವು ನ್ಯಾಯಾಧೀಕರಣದಲ್ಲಿ ಹೋರಾಟ ನಡೆಸುತ್ತೇವೆ. ಎಲ್ಲಾ ವಿಷಯಗಳ ಬಗ್ಗೆ ನಿಮಗೇಕೆ ಉತ್ತರ ಬೇಕು? ನ್ಯಾಯಾಧೀಕರಣ ತೀರ್ಮಾನ ಮಾಡುವುದಾದರೆ ಮಾಡಲಿ ಎಂದು ಸುದ್ದಿಗಾರರ ಮೇಲೆ ಪರ್ರಿಕರ್ ಹರಿಹಾಯ್ದರು.
ಮಹದಾಯಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕಳಸಾ-ಬಂಡೂರಿ ಅಣೆಕಟ್ಟು ಯೋಜನೆ ಕುರಿತು ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರಗಳ ನಡುವೆ ವಿವಾದವಿದ್ದು ಮಹದಾಯಿ ತಳಭಾಗದಿಂದ ನೀರನ್ನು ಮಲಪ್ರಭಾ ನದಿಗೆ ಹರಿಸಲು ಕರ್ನಾಟಕ ಉದ್ದೇಶವನ್ನು ಹೊಂದಿದೆ.
ಮಾಂಡೊವಿ ನದಿ ಎಂದು ಕರೆಯಲ್ಪಡುವ ಮಹದಾಯಿ ನದಿ ಕರ್ನಾಟಕದಲ್ಲಿ ಹುಟ್ಟಿ ಗೋವಾದ ಪಣಜಿ ಮತ್ತು ಮಹಾರಾಷ್ಟ್ರ ಮೂಲಕವಾಗಿ ಹರಿದು ಅರೇಬಿಯನ್ ಸಮುದ್ರ ಸೇರುತ್ತದೆ. ಕರ್ನಾಟಕದಲ್ಲಿ ಇದರ ಹರಿವು 28.8 ಕಿಲೋ ಮೀಟರ್ ಹಾಗೂ ಗೋವಾದಲ್ಲಿ 50ಕಿಲೋ ಮೀಟರ್ ಇದೆ.