ಉಗ್ರರ ವಿರುದ್ಧ ನಡೆಸಲಾಗುತ್ತಿರುವ ಎರಡನೇ ದಿನದ ಕಾರ್ಯಾಚರಣೆ ವೇಳೆ ಸ್ಥಳದಲ್ಲಿರುವ ಪೊಲೀಸ್ ವಾಹನ
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಸುಂಜುವಾನ್ ಸೇನಾ ಕ್ಯಾಂಪ್ ಮೇಲೆ ಉಗ್ರರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನಾಪಡೆ ಕಾರ್ಯಾಚರಣೆಯನ್ನು ಮುಂದುವರೆಸುತ್ತಿದೆ ಎಂದು ಸೋಮವಾರ ತಿಳಿದುಬಂದಿದೆ.
ಸುಂಜುವಾನ್ ಕ್ಯಾಂಪ್ ಬಳಿ ಕಾರ್ಯಾಚರಣೆ ನಡೆಸುತ್ತಿರುವ ಸೇನಾಪಡೆಗಳು ನಿನ್ನೆಯಷ್ಟೇ ನಾಲ್ವರು ಉಗ್ರರನ್ನು ಹತ್ಯೆ ಮಾಡಿತ್ತು. ಸ್ಥಳದಲ್ಲಿ ಮತ್ತಷ್ಟು ಉಗ್ರರು ಅಡಗಿ ಕುಳಿತಿರುವ ಶಂಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ಸ್ಥಳೀಯ ನಾಗರೀಕರನ್ನು ಸ್ಥಳಾಂತರಿಸಿ, ಸ್ಥಳದಲ್ಲಿ ಮಾರ್ಟರ್ ಶೆಲ್'ಗಳನ್ನು ಸ್ಫೋಟಿಸಿದ್ದಾರೆಂದು ವರದಿಗಳು ತಿಳಿಸಿವೆ.
ಈ ಕುರಿತಂತೆ ಹೇಳಿಕೆ ನೀಡಿರುವ ಸೇನಾ ವಕ್ತಾರ ಲೆ.ಕ. ದೇವೇಂದರ್ ಆನಂದ್ ಅವರು, ಕಾರ್ಯಾಚರಣೆ ವೇಳೆ ಮೂವರು ಉಗ್ರರು ಹಾಗೂ ಓರ್ವ ನಾಗರೀಕನ ಮೃತದೇಹಗಳು ದೊರಕಿದ್ದವು. ಇದರಂತೆ ದಾಳಿಯಲ್ಲಿ ಮೂರು ಉಗ್ರರು ಸೇರಿ ಒಟ್ಟು 6 ಮಂದಿ ಮೃತಪಟ್ಟಿದ್ದಾರೆ. ಕಳೆದ ರಾತ್ರಿ ನಡೆಸಲಾದ ಕಾರ್ಯಾಚರಣೆಯಲ್ಲಿ ಯಾವುದೇ ರೀತಿಯ ಗುಂಡಿನ ಚಕಮಕಿಗಳು ನಡೆದಿಲ್ಲ ಎಂದು ಹೇಳಿದ್ದಾರೆ.
ಉಗ್ರರು ದಾಳಿ ನಡೆಸಿದ ಪ್ರಕರಣದಲ್ಲಿ ಇಬ್ಬರು ಕಿರಿಯ ಅಧಿಕಾರಿಗಳು ಸೇರಿ ಒಟ್ಟು ಐವರು ಭದ್ರತಾ ಪಡೆಗಳು ಹುತಾತ್ಮರಾಗಿದ್ದಾರೆ. ಕ್ಯಾಂಪ್ ನಲ್ಲಿ ಉಗ್ರರು ದಾಳಿ ನಡೆಸಿದ ಸಂದರ್ಭದಲ್ಲಿ ಉಗ್ರರ ಕಪಿಮುಷ್ಟಿಗೆ ಸಿಲುಕಿದ್ದ ಯೋಧರೊಬ್ಬರ ತಂದೆ ಕೂಡ ದಾಳಿಯಲ್ಲಿ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.
ಉಗ್ರರು ದಾಳಿ ನಡೆಸುತ್ತಿದ್ದಂತೆಯೇ ಸೇನಾ ಪಡೆಗಳು ಪ್ರತಿ ದಾಳಿ ನಡೆಸಿ ದಿಟ್ಟ ಉತ್ತರವನ್ನು ನೀಡಿತ್ತು. ಈ ವೇಳೆ ಭಾರೀ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಯಿತು. ಭಾನುವಾರ ನಡೆಸಿದ್ದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಮೂರನೇ ಉಗ್ರನನ್ನು ನಿನ್ನೆ ಹತ್ಯೆ ಮಾಡಲಾಗಿದೆ ಎಂದಿದ್ದಾರೆ.
ಸೇನಾ ವಕ್ತಾರರು ಮಾತನಾಡಿ, ಹತ್ಯೆಯಾದ ಉಗ್ರರಿಂದ ಎಕೆ-56 ರೈಫಲ್ಸ್ ಗಳು, ಅಂಡರ್ ಬ್ಯಾರೆಲ್ ಗ್ರೆನೇಡ್ ಲಾಂಚರ್, ಸ್ಫೋಟಕ ವಸ್ತುಗಳು ಹಾಗೂ ಗ್ರೇನೇಡ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ಎಸ್.ಪಿ. ವೈದ್ ಮಾತನಾಡಿ, ಕಾರ್ಯಾಚರಣೆ ವೇಳೆ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ದಾಳಿ ಕುರಿತಂತೆ ತನಿಖೆ ಪ್ರಗತಿಯಲ್ಲಿದ್ದು, ಉಗ್ರರು ಎಲ್ಲಿಂದ ಬಂದಿದ್ದರು. ಪಾಕಿಸ್ತಾನದಿಂದ ಬಂದಿದ್ದರೇ, ಇಲ್ಲ ಕಾಶ್ಮೀರ ಮೂಲದವರೇ ಎಂಬುದರ ಕುರಿತಂತೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ನಡುವೆ ದಾಳಿ ನಡೆದ ಸ್ಥಳಕ್ಕೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಭೇಟಿ ನೀಡಿದ್ದು, ಸೇನಾಪಡೆಗಳಿಗೆ ಸಿಕ್ಕಿರುವ ಸಾಕ್ಷ್ಯಾಧಾರಗಳನ್ನು ಪರಿಶೀಲನೆ ನಡೆಸಿದ್ದಾರೆಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.