ದೇಶ

ಮಿ.ಭಾಗವತ್ ನಿಮಗೆ ನಾಚಿಕೆಯಾಗಬೇಕು: ಆರ್ ಎಸ್ಎಸ್ ಮುಖ್ಯಸ್ಥರಿಗೆ ರಾಹುಲ್ ಗಾಂಧಿ ತಿರುಗೇಟು

Sumana Upadhyaya

ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸೇನೆಯನ್ನು ಸಜ್ಜುಗೊಳಿಸಲು ಮೂರು ದಿವಸ ಸಾಕು  ಎಂದು ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಇದು ಪ್ರತಿಯೊಬ್ಬ ಭಾರತೀಯನಿಗೆ ಅವಮಾನ ಎಂದು ಟೀಕಿಸಿದ್ದಾರೆ.

ಮೋಹನ್ ಭಾಗವತ್ ಅವರ ಈ ರೀತಿ ಹೇಳಿಕೆ ನೀಡುವ ಮೂಲಕ ಹುತಾತ್ಮ ಯೋಧರಿಗೆ ಮತ್ತು ಭಾರತೀಯ ಸೇನೆಗೆ ಅಗೌರವ ತೋರಿಸಿದ್ದಾರೆ ಎಂದರು. ಈ ಕುರಿತು ಇಂದು ಟ್ವೀಟ್ ಮಾಡಿರುವ ಅವರು, ಹುತಾತ್ಮ ಯೋಧರು ಮತ್ತು ಸೈನಿಕರಿಗೆ ಅಗೌರವ ತೋರಿಸಿದ ನಿಮಗೆ ನಾಚಿಕೆಯಾಗಬೇಕು. ಭಾರತೀಯ ಧ್ವಜವನ್ನು ಗೌರವಿಸುವ ಮತ್ತು ಭಾರತೀಯ ಸೇನೆ ಹಾಗೂ ಸೈನಿಕರನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ ಆದ ಅವಮಾನ ಇದಾಗಿದೆ ಎಂದು ಟೀಕಿಸಿದ್ದಾರೆ.

ಮೋಹನ್ ಭಾಗವತ್ ಅವರ ಮಾತು ಪ್ರತಿಯೊಬ್ಬ ಭಾರತೀಯನಿಗೂ ಆದ ಅವಮಾನ. ಯಾಕೆಂದರೆ ನಮ್ಮ ದೇಶಕ್ಕೆ ಪ್ರಾಣ ಅರ್ಪಿಸಿದವರಿಗೆ ಅಗೌರವ ತೋರಿಸಿದ್ದಾರೆ. ಭಾರತದ ಧ್ವಜಕ್ಕೆ ವಂದಿಸುವ ಪ್ರತಿಯೊಬ್ಬ ಸೈನಿಕರನ್ನು ಅವಮಾನ ಮಾಡಲಾಗಿದೆ. ನಿಮಗೆ ನಾಚಿಕೆಯಾಗಬೇಕು ಭಾಗವತ್ ಅವರೇ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಬಿಹಾರ ರಾಜ್ಯದ ಮುಜಾಫರ್ ಪುರದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ನಿನ್ನೆ ಮೋಹನ್ ಭಾಗವತ್ ಮಾತನಾಡಿ, ದೇಶಕ್ಕಾಗಿ ಹೋರಾಡಲು ಸೇನೆಯನ್ನು ಸಜ್ಜುಗೊಳಿಸಲು ಆರ್ಎಸ್ಎಸ್ ಗೆ ಮೂರು ದಿನಗಳು ಸಾಕು, ಅದೇ ಸೇನೆಯಾದರೆ 6-7 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದರು. ಅವರು ಶಾಲೆಯೊಂದರಲ್ಲಿ ಆರ್ ಎಸ್ಎಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದರು.

SCROLL FOR NEXT