ದೇಶ

ಕರಣ್ ನಗರ ಎನ್ ಕೌಂಟರ್; ಓರ್ವ ಉಗ್ರನ ಹತ್ಯೆಗೈದ ಸೇನೆ, ಮುಂದುವರಿದ ಕಾರ್ಯಾಚರಣೆ

Srinivasamurthy VN
ಶ್ರೀನಗರ: ಜಮ್ಮುವಿನ ಕರಣ್ ನಗರ ಜನವಸತಿ ಪ್ರದೇಶದಲ್ಲಿ ಅವಿತಿರುವ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಓರ್ವ ಉಗ್ರನನ್ನು ಹೊಡೆದುರುಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದ್ದು, ಉಳಿದ ಓರ್ವ ಉಗ್ರನ ವಿರುದ್ಧ  ಎನ್ ಕೌಂಟರ್ ನಡೆಸಲಾಗುತ್ತಿದೆ.
ಸೇನಾ ಮೂಲಗಳು ತಿಳಿಸಿರುವಂತೆ ನಿನ್ನೆ ರಾತ್ರಿ ಜಮ್ಮುವಿನ ಕರಣ್ ನಗರದ ಬಳಿ ಇರುವ ಸೇನಾ ಶಿಬಿರದೊಳಗೆ ನುಸುಳ ಉಗ್ರರು ಪ್ರಯತ್ನಿಸಿದ್ದು, ಉಗ್ರರ ಪ್ರಯತ್ನವನ್ನು ಸೇನಾಪಡೆಗಳು ವಿಫಲಗೊಳಿಸಿವೆ. ಈ ವೇಳೆ  ತಪ್ಪಿಸಿಕೊಳ್ಳುವ ಸಲುವಾಗಿ ಉಗ್ರರು ಕರಣ್ ನಗರದ ಜನವಸತಿ ಪ್ರದೇಶದಲ್ಲಿನ ಮನೆಯೊಳಗೆ ನುಸುಳಿದ್ದು, ಅವಿತಿರುವ ಉಗ್ರರಿಗಾಗಿ ಕಳೆದ 24 ಗಂಟೆಯಿಂದ ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಇತ್ತೀಚೆಗೆ ಬಂದ ವರದಿಗಳ ಅನ್ವಯ ಪ್ರಸ್ತುತ ಕಾರ್ಯಾಚರಣೆ ನಡೆಸುತ್ತಿರುವ ಸೇನಾಪಡೆಗಳು ಓರ್ವ ಉಗ್ರನನ್ನು ಹೊಡೆದುರುಳಿಸಿದ್ದು, ಕಟ್ಟಡದಲ್ಲಿ ಅವಿತಿರುವ ಮತ್ತೋರ್ವ ಉಗ್ರನಿಗಾಗಿ ಕಾರ್ಯಾಚರಣೆ ಮುಂದುವರೆದಿದೆ.
ಇನ್ನು ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿರುವ ಜಮ್ಮು ಪೊಲೀಸ್ ವರಿಷ್ಠಾಧಿಕಾರಿ ಸ್ವಯಂ ಪ್ರಕಾಶ್ ಪಾಣಿ ಅವರು ಕಟ್ಟಡದೊಳಗೆ ನುಸುಳಿದ್ದ ಇಬ್ಬರು ಉಗ್ರರ  ಪೈಕಿ ಓರ್ವ ಉಗ್ರನನ್ನು ಕೊಂದು ಹಾಕಲಾಗಿದೆ. ಕಾರ್ಯಾಚರಣೆ  ನಿರ್ಣಾಯಕ ಹಂತದಲ್ಲಿದ್ದು ಉಳಿದ ಉಗ್ರನ ವಿರುದ್ಧದ ಎನ್ ಕೌಂಟರ್ ಪ್ರಗತಿಯಲ್ಲಿದೆ. ಶೀಘ್ರ ಕಾರ್ಯಾಚರಣೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಮಾಹಿತಿ ನೀಡಿದ್ದಾರೆ.
ಕರಣ್ ನಗರದ ಸಮೀಪದಲ್ಲೇ ಸೇನೆಯ ಸಿಆರ್ ಪಿಎಫ್ ಸೇನಾ ಶಿಬಿರವಿದ್ದು, ಇದರೊಳಗೆ ನುಸುಳಿ ದಾಳಿ ಮಾಡಬೇಕು ಎನ್ನುವುದು ಉಗ್ರ ಯೋಜನೆಯಾಗಿತ್ತು. ಆದರೆ ಇದಕ್ಕೂ ಮೊದಲೇ ಸೇನಾಪಡೆಗಳನ್ನು ಉಗ್ರರನ್ನು  ಗುರುತಿಸುವ ಮೂಲಕ ಆಗಬಹುದಾಗಿದ್ದ ದೊಡ್ಡ ಅಪಾಯವನ್ನು ತಪ್ಪಿಸಿದ್ದಾರೆ. ಇನ್ನು ನಿನ್ನೆ ರಾತ್ರಿಯಿಂದಲೇ ಕಾರ್ಯಾಚರಣೆ ನಡೆಯುತ್ತಿದ್ದು, ಓರ್ವ ಸಿಆರ್ ಪಿಎಫ್ ಯೋಧ ಹುತಾತ್ಮನಾಗಿದ್ದು, ಮತ್ತೋರ್ವ ಪೊಲೀಸ್  ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
SCROLL FOR NEXT