ನವದೆಹಲಿ: ಸೈನಿಕರು ಸೇರಿದಂತೆ 7 ಮಂದಿಯ ಸಾವಿಗೆ ಕಾರಣವಾಗಿದ್ದ ಕಾಶ್ಮೀರದ ಸುಂಜುವಾನ್ ಸೇನಾ ಶಿಬಿರದ ಮೇಲಿನ ದಾಳಿಗೆ ಪಾಕಿಸ್ತಾನ ಮೂಲದ ಜೈಶ್ ಇ ಮೊಹಮದ್ ಮತ್ತು ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಗಳು ಜಂಟಿ ಸಂಚು ರೂಪಿಸಿದ್ದವು ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ಉಗ್ರ ದಾಳಿ ಕುರಿತು ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಈ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಸುಂಜುವಾನ್ ಸೇನಾ ಶಿಬಿರ ಮತ್ತು ಶ್ರೀನಗರದ ಕರಣ್ ನಗರದಲ್ಲಿ ನಡೆದ ಉಗ್ರ ದಾಳಿಗಳಿಗೆ ಪಾಕಿಸ್ತಾನ ಮೂಲದ ಜೈಶ್ ಇ ಮೊಹಮದ್ ಮತ್ತು ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಗಳು ಜಂಟಿ ಸಂಚು ರೂಪಿಸಿದ್ದವು ಎಂದು ಹೇಳಲಾಗಿದೆ. ಆಧಿಕಾರಿಗಳು ತಿಳಿಸಿರುವಂತೆ ಎರಡ ಪ್ರತ್ಯೇಕ ಉಗ್ರ ಸಂಘಟನೆಗಳು ಸೇರಿ ದಾಳಿ ನಡೆಸಿರುವುದು ತೀರಾ ಅಪರೂಪದ ಪ್ರಕರಣವಾಗಿದ್ದು, ಗರಿಷ್ಟ ಸಾವು-ನೋವು ಈ ಸಂಚಿನ ಹಿಂದಿನ ಗುರಿಯಾಗಿತ್ತು ಎಂದು ಹೇಳಿದ್ದಾರೆ.
ಜಮ್ಮುವಿನ ಬಳಿ ಇರುವ ಸುಂಜುವಾನ್ ಸೇನಾ ಶಿಬಿರದ ಮೇಲೆ ಆತ್ಮಹತ್ಯಾ ದಾಳಿ ನಡೆಸುವ ಹೊಣೆಯನ್ನು ಜೈಶ್ ಇ ಮೊಹಮದ್ ಹೊತ್ತಿದ್ದು, ಶ್ರೀನಗರದ ಕರಣ್ ನಗರದ ಸಮೀಪ ಇರುವ ಸಿಆರ್ ಪಿಎಫ್ ಶಿಬಿರದ ಮೇಲಿನ ದಾಳಿ ಹೊಣೆಯನ್ನು ಲಷ್ತರ್ ಸಂಘಟನೆ ಹೊತ್ತುಕೊಂಡಿತ್ತು. ಇನ್ನು ಈ ದಾಳಿಗಳಿಗೆ ಪುಲ್ವಾಮ ಮತ್ತು ತ್ರಾಲ್ ನಲ್ಲಿರುವ ಉಗ್ರ ಸಂಘಟನೆಗಳ ಕಮಾಂಡರ್ ಗಳು ಸಂಚು ರೂಪಿಸಿರುವ ಸಾಧ್ಯತೆ ಇದ್ದು, ಇದರ ಬೆನ್ನಲ್ಲೇ ಶ್ರೀನಗರ ಸೇನಾ ಕ್ಯಾಂಪ್ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಂಜುವಾನ್ ದಾಳಿ ಮಾಡಿದ ಮೂವರು ಮತ್ತು ಕರಣ್ ನಗರದ ಮೇಲೆ ದಾಳಿ ಮಾಡಿದ್ದ ಇಬ್ಬರು ಉಗ್ರರನ್ನು ಹತ್ಯೆಗೈಯ್ಯಲಾಗಿದ್ದು, ಈ ಎಲ್ಲ ಐದೂ ಉಗ್ರರು ಪಾಕಿಸ್ತಾನ ಮೂಲದ ಉಗ್ರರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದೆಡೆ ಈ ದಾಳಿಯ ಕುರಿತು ಹಲವು ಅನುಮಾನಗಳು ವ್ಯಕ್ತವಾಗುತ್ತಿದ್ದು, ಉಗ್ರರು ಸೇನೆಯ ಗಮನ ಬೇರೆಡೆ ಸೆಳೆಯಲು ಈ ದಾಳಿ ನಡೆಸಿರಬಹುದು ಎನ್ನಲಾಗುತ್ತಿದ್ದು, ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ.