ದೇಶ

ರಸ್ತೆ ಬದಿಯಲ್ಲೇ ಮೂತ್ರ ವಿಸರ್ಜನೆ, ದೊಡ್ಡ ವಿಚಾರವೇನಲ್ಲ ಎಂದ ರಾಜಸ್ತಾನ ಸಚಿವ

Srinivasamurthy VN
ಜೈಪುರ: ಅತ್ತ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತಕ್ಕಾಗಿ ಅಭಿಯಾನ ನಡೆಸುತ್ತಿದ್ದರ ಇತ್ತ ರಾಜಸ್ತಾನದಲ್ಲಿ ತಮ್ಮದೇ ಬಿಜೆಪಿ ಪಕ್ಷದ ಸಚಿವರೊಬ್ಬರು ರಸ್ತೆ ಬದಿಯಲ್ಲಿ ಮೂತ್ರವಿಸರ್ಜನೆ ಮಾಡುವ ಮೂಲಕ  ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ.
ರಾಜಸ್ತಾನದ ಆರೋಗ್ಯ ಸಚಿವ ಕಾಳಿಚರಣ್ ಸರಫ್ ಅವರು ಜೈಪುರ ಹೊರವಲಯದಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವ ಮೂಲಕ ಸಿಕ್ಕಿಬಿದಿದ್ದಾರೆ. ಜೈಪುರ ಮುನ್ಸಿಪಲ್ ಕಾರ್ಪೋರೇಷನ್ ನ ನಿಯಮಾವಳಿಗಳ  ಅನ್ವಯ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಿದರೆ 200 ರೂ. ದಂಡ ವಿಧಿಸುವ ಅವಕಾಶವಿದೆ. ಹೀಗಿದ್ದೂ ಸ್ವಚ್ಛತೆ ಕುರಿತು ಪಾಠ ಮಾಡಬೇಕಾದ ರಾಜ್ಯದ ಆರೋಗ್ಯ ಸಚಿವರೇ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ  ಮಾಡುವ ಮೂಲಕ ನಗೆಪಾಟಲಿಗೆ ಈಡಾಗಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮಗಳು ಪ್ರತಿಕ್ರಿಯೆ ಕೇಳಿದಾಗ ಉತ್ತರ ನೀಡಲು ನಿರಾಕರಿಸಿರುವ ಸಚಿವ ಕಾಳಿಚರಣ್ ಸರಫ್ ಅವರು, ಇದೇನೂ ದೊಡ್ಡ ವಿಚಾರವಲ್ಲ, ಬಿಡಿ ಎಂದು ಉಡಾಫೆ ಉತ್ತರ ನೀಡಿ ಜಾರಿಕೊಂಡಿದ್ದಾರೆ. ಇನ್ನು  ಕಾಳಿಚರಣ್ ಅವರ ಈ ಕಾರ್ಯ ರಾಜಸ್ತಾನದ ಸಿಎಂ ವಸುಂಧರಾ ರಾಜೇ ಅವರ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿದ್ದು, ಬಿಜೆಪಿ ಸರ್ಕಾರದ ಸ್ವಚ್ಛ ಭಾರತ ಅಭಿಯಾನಕ್ಕೂ ಹಿನ್ನಡೆಯುಂಟು ಮಾಡಿದೆ.  ಅಭಿಯಾನ ನಡೆಸುವ ಸರ್ಕಾರದ ಮಂತ್ರಿಗಳೇ ಕಾನೂನು ಮುರಿದರೆ ಸಾರ್ವಜನಿಕರು ಹೇಗೆ ನಿಯಮ ಪಾಲಿಸುತ್ತಾರೆ ಎಂಬ ವಾದ ಕೂಡ ಕೇಳಿಬರುತ್ತಿದೆ.
ಇತ್ತ ಆರೋಗ್ಯ ಸಚಿವ ಕಾಳಿಚರಣ್ ಅವರ ಮೂತ್ರ ವಿಸರ್ಜನೆ ವಿಚಾರ ಮಾಧ್ಯಮಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದಂತೆಯೇ ಸಿಎಂ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಟೀಕಾಪ್ರಹಾರ ನಡೆಸಿದೆ. ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಮುಖಂಡ ರಘು ಶರ್ಮಾ, ಕೂಡಲೇ ಆರೋಗ್ಯ ಸಚಿವ ಕಾಳಿಚರಣ್ ಸರಫ್ ಅವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಸಿಸಿದ್ದಾರೆ. ಸ್ವಚ್ಛ ಭಾರತದ ಬಗ್ಗೆ ಮಾತನಾಡುನ ಬಿಜೆಪಿ ಸರ್ಕಾರ ತಾನು ಮಾತ್ರ ಅದನ್ನು ಪಾಲನೆ ಮಾಡುವುದಿಲ್ಲ. ಇಂತಹ ಕ್ರಿಯಗಳಿಂದ ಬಿಜೆಪಿ ಸರ್ಕಾರ ಜನತೆಗೆ ಯಾವ ಸಂದೇಶ ಸಾರುತ್ತಿದೆ ಎಂದು ಕಿಡಿಕಾರಿದ್ದಾರೆ.
SCROLL FOR NEXT